ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಾದ ಕಡೂರು ತಾಲೂಕಿನ ಗಡಿ ಭಾಗದ ಹಡಗಲು ತಿಮ್ಮಾಪುರ, ಕಳ್ಳಿಹೊಸಳ್ಳಿ, ಕಲ್ಕೆರೆ ಭಾಗದಲ್ಲಿ ಒಂದು ಕಾಲದಲ್ಲಿ ಮಳೆಗಾಲದಲ್ಲೂ ಕೂಡ ನೀರಿನ ಬವಣೆ ಹೇಳತೀರದಾಗಿತ್ತು.
ಕುಡಿಯುವ ನೀರಿಗೆ ಟ್ಯಾಂಕರ್ ನೀರೇ ಗತಿಯಾಗಿದ್ದ ಈ ಬಯಲುಸೀಮೆಯ ಹಳ್ಳಿಗಳಲ್ಲೀಗ ಕಣ್ಣಾಯಿಸಿದಲ್ಲೆಲ್ಲಾ ನೀರೇ ನೀರು. ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ಎರಡೂ ಬದಿಯ ತಡೆಗೋಡೆಗಳು ಕೊಚ್ಚಿ ಹೋಗುತ್ತಿವೆ. ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ದೂರದ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಈ ಕಾಲುವೆ ಕೋಲಾರ, ಚಿತ್ರದುರ್ಗ, ತುಮಕೂರಿನ ಜನರ ಪಾಲಿಗೆ ಜೀವನದಿಯಾದ್ರೆ ಕಡೂರು ತಾಲೂಕಿನ ಬಯಲು ಸೀಮೆಯ ಜನರ ಪಾಲಿಗೆ ಇದು ಪ್ರತಿನಿತ್ಯ ಜೀವಭಯ ಸೃಷ್ಟಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಕುಕ್ಕ ಸಮುದ್ರ ಕೆರೆಗೆ ನೀರು ಹರಿಸುವಲ್ಲಿ ಎಡವಿದ್ರು. ಪೈಪ್ಲೈನ್ನಲ್ಲಿ ನೀರು ಹರಿಸುವ ಬದಲು ಹಳ್ಳದಲ್ಲೇ ನೀರುಬಿಟ್ಟು ಅಧಿಕಾರಿಗಳು ತಮ್ಮ ಕೈ ತೊಳೆದುಕೊಂಡ್ರು. ಹಳ್ಳದ ಮೂಲಕ ನೀರು ಹರಿಸುವ ವೇಳೆ ಸ್ಥಳೀಯರು ವಿರೋಧಿಸಿದ್ದಾರೆ.
ಆ ಸಂದರ್ಭದಲ್ಲಿ ಏರಿ ನಿರ್ಮಾಣ ಮಾಡಿಕೊಡುವುದಾಗಿ ಹುಸಿ ಭರವಸೆ ನೀಡಿದ್ದ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. ಕಾಲುವೆಯ ತಡೆಗೋಡೆಗಳು ಕಳಪೆ ಮಟ್ಟದ್ದಾಗಿದೆ. ಹಾಗಾಗಿ, ಜಮೀನುಗಳಿಗೆ ನೀರು ನುಗ್ಗುತ್ತಿದೆ ಎಂದು ರೈತರು ಕಿಡಿ ಕಾರಿದ್ದಾರೆ.
ಸರ್ಕಾರ ನಮಗೆ ಪ್ರತಿ ವರ್ಷ ಬೆಳೆ ಪರಿಹಾರ ಕೊಡುವ ಬದಲು ನಮಗೆ ಸೂಕ್ತ ಭದ್ರತೆ ಮಾಡಿಕೊಟ್ರೆ ನಾವೇ ಕೋಟಿಗಟ್ಟಲೆ ಆದಾಯ ಮಾಡಿಕೊಂಡು ಸರ್ಕಾರಕ್ಕೂ ನಾವೇ ದುಡ್ಡು ಕೊಡ್ತೀವಿ ಅಂತಿದ್ದಾರೆ ಇಲ್ಲಿನ ರೈತರು.
ಇದನ್ನೂ ಓದಿ: ಇಂದು-ನಾಳೆ ರಾಜ್ಯದಾದ್ಯಂತ ವ್ಯಾಪಕ ಮಳೆ, ಕ್ರಮೇಣ ಇಳಿಕೆ : ಹವಾಮಾನ ಇಲಾಖೆ
ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತು ನಮಗೆ ಸ್ಪಂದಿಸದಿದ್ರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂರುವ ಏಚ್ಚರಿಕೆಯ ಸಂದೇಶವನ್ನು ಇಲ್ಲಿನ ರೈತರು ರವಾನಿಸಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಭೇಟಿ ಕೊಟ್ಟು ಸಮಸ್ಯೆ ಬಗೆಹರಿಸಬೇಕಿದೆ.