ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಷ್ಟು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಜನರು ಸುಸ್ತಾಗಿ ಹೋಗಿದ್ದರು. ಆದರೆ ಈಗ ಜಿಲ್ಲೆಯ ಬಯಲುಸೀಮೆ ಭಾಗದಲ್ಲೂ ಎಡಬಿಡದೆ ಮಳೆ ಸುರಿಯುತ್ತಿದ್ದು, ಜನ ಸಂಕಷ್ಟದಲ್ಲಿದ್ದಾರೆ.
ಜಿಲ್ಲೆಯ ಬಯಲುಸೀಮೆ ತಾಲೂಕು ತರೀಕೆರೆಯ ಅಜ್ಜಂಪುರ, ಶಿವನಿ ಭಾಗದಲ್ಲಿ ಇಡೀ ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡ ದೊಡ್ಡ ಕೆರೆಗಳ ಕೋಡಿ ಬಿದ್ದಿದೆ. ಜೊತೆಗೆ ತಾಲೂಕಿನ ಎ.ರಂಗಾಪುರ ಗ್ರಾಮದಲ್ಲಿ ಸುಮಾರು 10 ಮನೆಗಳಿಗೆ ನೀರು ನುಗ್ಗಿದ್ದು, ಜನರು ಮನೆಯಿಂದ ಹೊರ ಬರಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತರೀಕೆರೆಯ ಹಾದಿಕೆರೆ-ಇಟ್ಟಿಗೆ ಸಂಪರ್ಕ ಬಂದ್ ಆಗಿದೆ. ಜೊತೆಗೆ ಅಜ್ಜಂಪುರ ಸಮೀಪದ ಮಗುಳಿ ಸೇತವೆ ಮುಳುಗಿದ್ದು, ಮುಗುಳಿ - ತಮಟಹಳ್ಳಿ ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ. ಈ ಹಿನ್ನೆಲೆ ಸಂಚಾರ ಕೂಡ ಸ್ಥಗಿತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ತಾಲೂಕಿನ ಜಂಬದ ಹಳ್ಳ ಪೂರ್ತಿಯಾದ ಹಿನ್ನೆಲೆ ಜಲಾಶಯದಿಂದಲೂ ನೀರನ್ನು ಹೊರಕ್ಕೆ ಹರಿಬಿಡಲಾಗುತ್ತಿದೆ. ಮಳೆಯ ನೀರು ಹಾಗೂ ಜಲಾಶಯದ ನೀರು ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದು, ಜನರಿಗೆ ತೊಂದರೆ ಆಗುತ್ತಿದೆ. 12 ವರ್ಷಗಳ ನಂತರ ಜಂಬದ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ತರೀಕೆರೆ ತಾಲೂಕಿನಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಉರುಳಿ ಬಿದ್ದ ಕಾರು:
ನಿರಂತರ ಮಳೆಯ ಕಾರಣಾದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆಯ ಮೇಲೆ ನೀರು ಹರಿಯುತ್ತಿರುವ ಕಾರಣ ಈ ಘಟನೆ ಸಂಭವಿಸಿದೆ. ಲಿಂಗದಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿಯೂ ಅಡಿಕೆ ತೋಟ ಹಾಗೂ ಬಾಳೆ ತೋಟ ಮುಳುಗಡೆಯಾಗಿವೆ. ಅಲ್ಲದೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ರೈತನ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ:
ಇವೆಲ್ಲಾ ಒಂದೆಡೆಯಾದರೆ, ರೈತನ ಸಂಕಷ್ಟ ಮುಗಿಲು ಮಟ್ಟುವಂತಿದೆ. ಮಳೆಯ ನೀರಿಗೆ ಕೊಚ್ಚಿ ಹೋದ ಸಾವಿರಾರು ಚೀಲ ಈರುಳ್ಳಿ ಬೆಳೆ ರಸ್ತೆಯಲ್ಲಿ ಹರಡಿ ಬಿದ್ದಿದ್ದ ದೃಶ್ಯ ನೋಡಿ ಈರುಳ್ಳಿ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.