ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶೃಂಗೇರಿ ರಸ್ತೆಯ ಜಲದುರ್ಗದ ಬಳಿ ಭೂ ಕುಸಿತ ಉಂಟಾಗಿದ್ದು, ರಾಜ್ಯ ಹೆದ್ದಾರಿ 27ರ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರಸ್ತೆಯ ಹಲವು ಕಡೆ ಮರಗಳು ಧರೆಗುರುಳಿದ್ದು, ಶೃಂಗೇರಿ ಚಿಕ್ಕಮಗಳೂರು ರಸ್ತೆ ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಇನ್ನು ಮೂಡಿಗೆರೆ ತಾಲೂಕಿನ ಚನ್ನದ್ಲು ಹಾಗೂ ಹಿರೆಬೈಲು ಗ್ರಾಮದಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಕಳೆದ ವರ್ಷ ಈ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ ಹತ್ತಾರು ಮನೆಗಳು ಕೊಚ್ಚಿ ಹೋಗಿ, ನೂರಾರು ಎಕರೆ ತೋಟ ಹಾನಿಗೊಳಗಾಗಿತ್ತು.
ನಿರಂತರ ಮಳೆ ಸುರಿಯುತ್ತಿರುವ ಕಾರಣ ಬಾಳೆಹೊನ್ನೂರಿನಲ್ಲಿ ಹರಿಯುವ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಧೋಬಿ ಹಳ್ಳ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ನಗರದ ಮಾರ್ಕೆಟ್ ಆವರಣಕ್ಕೆ ನೀರು ನುಗ್ಗಿದ್ದು, ಆವರಣದಲ್ಲಿ ಇದ್ದಂತಹ ಅಂಗಡಿಗಳು ಮುಳುಗುವ ಹಂತ ತಲುಪುತ್ತಿವೆ. ಆವರಣದಲ್ಲಿರುವ ಮೆಡಿಕಲ್ ಸ್ಟೋರ್ಗೂ ನೀರು ನುಗ್ಗಿದ್ದು, ಜನರು ಆತಂಕದಲ್ಲಿರುವಂತೆ ಮಾಡಿದೆ.
ಈ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಕ್ಷಣದಿಂದ ಕ್ಷಣಕ್ಕೆ ಭದ್ರಾ ನದಿಯಲ್ಲಿ ಹರಿವಿನ ಮಟ್ಟ ಹೆಚ್ಚಳವಾಗುತ್ತಿದೆ. ನದಿ ಪಾತ್ರದ ಕಾಫಿ ಹಾಗೂ ಅಡಕೆ ತೋಟಕ್ಕೆ ನೀರು ನುಗ್ಗುತ್ತಿದ್ದು,ಅಡಕೆ ಗಿಡಗಳು ನೀರಿನಲ್ಲಿ ತೇಲಿ ಹೋಗುತ್ತಿವೆ. ನಿರಂತರ ಮಳೆಯಿಂದ ರೈತರ ಬೆಳೆಗಳು ಮಳೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು, ರೈತರು ಕೂಡ ಆತಂಕದಲ್ಲಿದ್ದಾರೆ. ಅಲ್ಲದೇ ನದಿ ಪಾತ್ರದ ಮನೆಗಳಲ್ಲಿ ವಾಸವಾಗಿರುವ ಜನರು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಾಗಿದೆ.