ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಕೂಡ ಧಾರಾಕಾರ ಮಳೆ ಮುಂದುವರೆದಿದ್ದು, ನಗರ ಸೇರಿದಂತೆ ಮಲೆನಾಡು ಭಾಗದ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿ, ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಎನ್ಆರ್ ಪುರ, ಜಯಪುರ, ಕಡೂರು, ತರೀಕೆರೆಗಳಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನಿರಂತರ ಮಳೆಯ ಕಾರಣ ಕಳಸ ಹಾಗೂ ಬಾಳೆಹೊನ್ನೂರು ರಸ್ತೆ ಸಂಪರ್ಕ ಕಲ್ಪಿಸುವ ಮಾಲಗೋಡು ರಸ್ತೆ ಸಂಪೂರ್ಣ ಜಲವೃತವಾಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ರಸ್ತೆಯ ಮೇಲೆ ಈ ಭಾಗದಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದಾಗಿ ತರೀಕೆರೆ ತಾಲೂಕಿನಲ್ಲಿ ಎಪಿಎಂಸಿ ಆವರಣದ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರ ಧರೆ ಗುರುಳಿದ್ದು, ಅಲ್ಲೇ ಇದ್ದ ಟೀ ಅಂಗಡಿ ಸ್ಥಿತಿಯೂ ಹದಗೆಟ್ಟಿದೆ. ಕೂದಲೆಳೆಯ ಅಂತರದಲ್ಲಿ ಟೀ ಅಂಗಡಿ ಮಾಲೀಕ ಬಚಾವಾಗಿದ್ದು, ಟೀ ಅಂಗಡಿಯಲ್ಲಿದ್ದಂತಹ ಪಾತ್ರೆಗಳು ಹಾಗೂ ಇತರೆ ವಸ್ತುಗಳು ಸಂಪೂರ್ಣವಾಗಿದೆ ಜಖಂ ಆಗಿವೆ.
ಕೆಮ್ಮಣ್ಣುಗುಂಡಿಯಲ್ಲಿಯೂ ವರುಣನ ರೌದ್ರ ನರ್ತನ ಮುಂದುವರೆದಿದ್ದು, ರವಿಚಂದ್ರ ನಾಯಕ್ ಎಂಬುವರ ಮನೆಯ ಮೇಲೆ ಮರ ಬಿದ್ದು, ಮನೆ ಸಂಪೂರ್ಣ ಜಖಂ ಆಗಿದೆ. ಪ್ರಕಾಶ್ ಎಂಬುವರ ಬುಲೆರೋ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣವಾಗಿ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿಯ ಮೇಲ್ಚಾವಣಿ ಮಳೆಗಾಳಿಗೆ ಹಾರಿ ಹೋಗಿದೆ. ಕಳೆದ ವರ್ಷವಷ್ಟೇ ಈ ಗ್ರಾಮ ಪಂಚಾಯಿತಿಯ ಕಟ್ಟಡ ದುರಸ್ತಿ ಕಾರ್ಯ ನಡೆದಿತ್ತು.
ಇನ್ನೂ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮುಳುಗುವ ಹಂತ ತಲುಪಿದೆ. ಭದ್ರಾ ನದಿ ಉಕ್ಕಿ ಹರಿಯಲು ಪ್ರಾರಂಭ ಮಾಡಿದ್ದು, ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಪರದಾಟ ನಡೆಸುವಂತಾಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ, ಜನ ಜೀವನದಲ್ಲಿ ಸಂಪೂರ್ಣ ಅಸ್ತವ್ಯಸ್ತವಾಗಿದೆ.