ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಗಾಳಿ ಹಾಗೂ ಧಾರಾಕಾರ ಮಳೆಯಿಂದ ಮಲೆನಾಡು ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕೊಪ್ಪ, ಎನ್.ಆರ್ ಪುರ, ಶೃಂಗೇರಿ, ಕಳಸ, ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಯಿಂದ ಜನರು ಹೊರ ಬರಲು ಹೆದರುತ್ತಿದ್ದು, ಮಲೆನಾಡು ಭಾಗದ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ಸಂಪರ್ಕ ಕಡಿತವಾಗಿದೆ. ಅನೇಕ ರಸ್ತೆಗಳಲ್ಲಿ ಮಳೆ-ಗಾಳಿಗೆ ಮರಗಳು ಧರೆಗುರುಳಿ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.
ಮಲೆನಾಡು ಭಾಗದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಯ ಮೇಲೆ ಮಳೆಯ ನೀರು ತುಂಬಿ ಹರಿಯಲು ಪ್ರಾರಂಭವಾಗಿದೆ. ಜಿಲ್ಲೆಯ ವಿವಿಧ ಭಾಗದಲ್ಲಿ ಸಣ್ಣಪುಟ್ಟ ಮಣ್ಣು ಕುಸಿತ ಉಂಟಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಏನು ಅನಾಹುತ ಕಾದಿದೆಯೋ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.