ಚಿಕ್ಕಮಗಳೂರು : ಜಿಲ್ಲೆಯಲ್ಲಿ ಚಳಿಗಾಲದಲ್ಲೂ ಮಳೆಯಾಗುತ್ತಿದ್ದು, ಕಾಫಿ ಬೀಜಗಳು ನೆಲಕಚ್ಚಿವೆ.
ಚಿಕ್ಕಮಗಳೂರು ಪ್ರವಾಸಿಗರ ಹಾಟ್ಸ್ಪಾಟ್. ಕಾಫಿನಾಡಿಗೆ ಮೆರುಗು ತಂದುಕೊಟ್ಟಿದ್ದ ಕಾಫಿ ತೋಟಗಳು ಮಳೆರಾಯನ ಹೊಡೆತಕ್ಕೆ ಸಿಕ್ಕಿವೆ.
ವಾರದಿಂದ ಬಿಡದ ಮಳೆ :
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮಳೆಗಾಲವನ್ನು ಮೀರಿಸುವಂತೆ ಮಳೆಯಾಗುತ್ತಿದೆ. ಇದರಿಂದ ಒಂದೆಡೆ ಕೊಯ್ಲು ಮಾಡದ ಕಾಫಿ ಫಸಲು ಮಳೆಯ ಆರ್ಭಟಕ್ಕೆ ಒಡೆದು ಹೋಗುತ್ತಿವೆ. ಮತ್ತೊಂದೆಡೆ, ಮಳೆ ಹನಿಗಳ ರಭಸಕ್ಕೆ ಗಿಡದಿಂದ ಕಾಫಿ ಬೀಜಗಳು ಉದುರುತ್ತಿವೆ. ಇದು ಒಂದೆಡೆಯಾದರೆ ಕಾಫಿಯನ್ನು ಕೊಯ್ಲು ಮಾಡಿದ ರೈತರದ್ದು ಮತ್ತೊಂದು ಚಿಂತೆಯಾಗಿದೆ.
ಒಣ ಹಾಕಿದ ಕಾಫಿ ರಾಶಿ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗುತ್ತಿದೆ. ಅಯ್ಯೋ ಒಣಗಿಸೋದೇ ಬೇಡ ಹಾಗೆಯೇ ಇಡೋಣ ಎಂದು ಒಳಗಿಟ್ಟರೆ ಒದ್ದೆಯಾಗಿರುವ ಕಾಫಿ ಫಸಲು ಬೂಸು ಹಿಡಿಯುತ್ತಿದೆ. ಆ ಕಡೆ ಒಣಗಿಸಲು ಸಾಧ್ಯವಾಗದೆ, ಈ ಕಡೆ ಒಳಗಿಡಲು ಸಾಧ್ಯವಾಗದೆ ರೈತರು ಯಾತನೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್ಆರ್ ಪುರ ತಾಲೂಕಿನಲ್ಲಿ ಹೆಚ್ಚು ಕಾಫಿ ಬೆಳೆ ಬೆಳೆಯುತ್ತಿದ್ದಾರೆ. ಅಕಾಲಿಕ ಮಳೆ ಹೊಡೆತವನ್ನು ಕಂಡು ಸಾಕಪ್ಪಾ ಸಾಕು ಮಳೆ ಸಹವಾಸ ಎಂದು ಜನರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅಕಾಲಿಕ ಮಳೆಯಿಂದ ಇನ್ನೂ ಕಾಫಿ ಕೊಯ್ಲು ಆಗಿಲ್ಲ. ಕೊಯ್ಲು ಮಾಡೋಣ ಅಂದ್ರೆ ಮಳೆ ಬಿಡ್ತಿಲ್ಲ. ಇನ್ನೊಂದೆಡೆ, ಗಿಡದಲ್ಲಿರೋ ಕಾಫಿ ಬೀಜ ಒಡೆದು ಹೋಗುತ್ತಿದೆ. ಇದನ್ನು ಮಾರಿದರೂ ಮೂರು ಕಾಸಿಗೆ ಕೇಳ್ತಾರೆ. ಅಲ್ಲದೇ ಕಾಫಿ ಮಳೆಗೆ ಸಿಕ್ಕಿರೋದ್ರಿಂದ ಈ ಬಾರಿ ಅಳಿದುಳಿದ ಬೆಳೆಗೂ ಉತ್ತಮ ರೇಟ್ ಸಿಗೋದು ಅನುಮಾನ. ಅದಲ್ಲದೆ ಕಾಫಿ ಕೊಯ್ಲಿಗೂ ಕಾರ್ಮಿಕರು ಸಿಗುತ್ತಿಲ್ಲ. ಇಷ್ಟೆಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಕಾಫಿ ಕೊಯ್ಲು ಮಾಡಬೇಕಾ ಎನ್ನುವ ಪ್ರಶ್ನೆ ಬೆಳೆಗಾರರನ್ನು ಕಾಡುತ್ತಿದೆ.