ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾ ಮಳೆಗೆ ಮಲೆನಾಡಿನ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಮಗಳೂರು ತಾಲೂಕಿನಲ್ಲಿರುವ ದತ್ತಾಪೀಠ ಹಾಗೂ ಮುಳ್ಳಯ್ಯನ ಗಿರಿಯಲ್ಲಿ ಗುಡ್ಡ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 14 ರವರೆಗೂ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಅಲ್ಲಲ್ಲಿ ದೊಡ್ಡ ಗಾತ್ರದಲ್ಲಿ ಗುಡ್ಡ ಕುಸಿತ ಆಗುತ್ತಿರುವ ಹಿನ್ನೆಲೆ ಈ ಆದೇಶವನ್ನು ಜಾರಿ ಮಾಡಲಾಗಿದೆ.
ಕುಸಿದ ಗುಡ್ಡಕ್ಕೆ ಮನೆ ನಾಶ; ಪ್ರಾಣಾಪಾಯದಿಂದ ಪಾರಾಯ್ತು ಕುಟುಂಬ!
ಹಾಗೆಯೇ ಮಳೆಯ ಆರ್ಭಟದಿಂದಾಗಿ ತೋಟದ ಮೇಲೆಯೇ ಗುಡ್ಡವೊಂದು ಕುಸಿದು ಬಿದ್ದಿದ್ದು, ಇದರಿಂದ ಸಂಪೂರ್ಣವಾಗಿ ಮನೆ ಹಾಗೂ ತೋಟ ಮುಚ್ಚಿ ಹೋಗಿರುವ ಘಟನೆ ಜಿಲ್ಲೆಯ ಸಿರಿವಾಸೆಯಲ್ಲಿನ ನಡೆದಿದೆ. ನಿತೀಶ್ ಹಾಗೂ ನಂಧೀಶ್ ಎಂಬುವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆಯಲ್ಲಿವದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ರಾತ್ರೋರಾತ್ರಿ ಊರಿನ ಗ್ರಾಮಸ್ಥರು ಗ್ರಾಮ ತೊರೆದಿದ್ದು, ಗುಡ್ಡದ ಮಣ್ಣಿನಿಂದ ನಾಲ್ಕು ಎಕರೆಗೂ ಅಧಿಕ ಜಾಗ ಮುಚ್ಚಿ ಹೋಗಿದೆ. ಅಲ್ಲದೆ, ಸಿರಿವಾಸೆ ಮತ್ತು ಹಡ್ಲುಗದ್ದೆ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಮುಂದೇನಾಗುತ್ತೋ ಎಂಬ ಭಯದಲ್ಲಿ ಈ ಭಾಗದ ಜನರಿದ್ದಾರೆ.
ಮೂಡಿಗೆರೆಗೆ ಬಂದಿಳಿಯಿತು ಯೋಧರ ತಂಡ
ಮೂಡಿಗೆರೆ ತಾಲೂಕಿನ ಆಲೇಖಾನ್ ಹೊರಟ್ಟಿ ಗ್ರಾಮಸ್ಥರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ರಕ್ಷಣೆಗೆಂದು ಹೋದ 10 ಮಂದಿ ಅಗ್ನಿ ಶಾಮಕ ದಳದ ಸಿಬ್ಬಂದಿಗೂ ಸಮಸ್ಯೆ ಎದುರಾಗಿದೆ. ಅವರ ರಕ್ಷಣೆಗಾಗಿ ಯೋಧರ ತಂಡ ಹಾಗೂ ತಾಲೂಕಿನ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಭಯದಿಂದಲೇ ಆಲೇಖಾನ್ ಗ್ರಾಮಸ್ಥರು ಕಾಲ ಕಳೆಯುತ್ತಿದ್ದು, ಈ ಭಾಗದಲ್ಲಿ ಇನ್ನೂ ಗುಡ್ಡ ಕುಸಿತ ಉಂಟಾಗುತ್ತಲೇ ಇದೆ.
ಹಾಗೆಯೇ ತಾಲೂಕಿನ ಕಳಸದ ಕಲ್ಮಕ್ಕಿ ಹಾಗೂ ಕುಕ್ಕೋಡು ಗ್ರಾಮದಲ್ಲಿ ಎರಡೆರಡೂ ಬಾರಿ ಗುಡ್ಡ ಕುಸಿತ ಉಂಟಾಗಿದ್ದು, ಜನರು ಭಯಭೀತರಾಗಿದ್ದಾರೆ. ನಿರಂತರ ಮಳೆಯ ಜೊತೆಗೆ ಗುಡ್ಡವೂ ಕುಸಿಯೋ ಹಿನ್ನೆಲೆ ಜನರು ದಿಕ್ಕು ತೋಚದಂತಾಗಿದ್ದಾರೆ.