ಚಿಕ್ಕಮಗಳೂರು: ಇಂದು ಸಹ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದೆ. ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳು ಮುಳುಗಡೆಯಾಗಿವೆ. ಇತಿಹಾಸ ಪ್ರಸಿದ್ಧ ಮಾರ್ಕಂಡೇಶ್ವರ ಗೋರಿಗಂಡಿಯಲ್ಲಿರುವ ಚರ್ಚ್ ಹಾಗೂ ಮಸೀದಿ ಮುಳುಗಡೆಯ ಹಂತ ತಲುಪಿವೆ.
ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಖಾಂಢ್ಯ-ಬಾಳೆಗದ್ದೆಯ ತೂಗು ಸೇತುವೆ ಕೊಚ್ಚಿ ಹೋಗಿದೆ. ಭದ್ರಾ ನದಿಯನ್ನು ದಾಟಲು ಸಾಧ್ಯವಾಗದೆ ಬಾಳೆಗದ್ದೆ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿವೆ. ಹೇಮಾವತಿ, ತುಂಗಾ, ಭದ್ರಾ ನದಿ ಪಾತ್ರದ ಹಲವು ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ.
ಮೂಡಿಗೆರೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಮುಗ್ರಹಳ್ಳಿ, ಕೋಳೂರು, ಬಕ್ಕಿ, ಬೆಟ್ಟಗೆರೆ, ಹಾಲೂರು, ಕಿತ್ತಲೆಗಂಡಿ ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ. ಭದ್ರಾ ನದಿಯ ಹರಿವು ಹಾಗೂ ವೇಗ ಹೆಚ್ಚುತ್ತಲೇ ಇದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.
ಇತ್ತ ಶೃಂಗೇರಿ ತುಂಗಾ ಹಾಗೂ ಭದ್ರೆಯ ಅಬ್ಬರಕ್ಕೆ ನಲುಗಿದೆ. ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು, ಜನ ಜನರೇಟರ್ ಮೊರೆ ಹೋಗಿದ್ದಾರೆ. ಶೃಂಗೇರಿ ಮಠದ ಪಕ್ಕದಲ್ಲಿರುವ ಗಾಂಧಿ ಮೈದಾನ ಜಲಾವೃತಗೊಂಡಿದೆ. ಸಂಕಷ್ಟದಲ್ಲಿರುವವರನ್ನು ತಲುಪದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.