ಚಿಕ್ಕಮಗಳೂರು : ಮಹಾಮಳೆಗೆ ಮಲೆನಾಡಿಗರು ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹೌದು, ಮೈದುಂಬಿ ಹರಿಯುತ್ತಿರೋ ಹೇಮಾವತಿ ನದಿ. ಜಲಾವೃತಗೊಂಡಿರೋ ತೋಟಗಳು. ಮುಳುಗಿರೋ ಹೊಲ-ಗದ್ದೆಗಳು. ಎಲ್ಲೆಂದರಲ್ಲಿ ಮನಸ್ಸೋ ಇಚ್ಛೆ ಹರಿಯುತ್ತಿರೋ ನೀರು. ಮಲೆನಾಡು ಭಾಗದಲ್ಲಿ ಎಲ್ಲಿ ನೋಡಿದರೂ ನೀರು, ನೀರು ಹಾಗೂ ನೀರು. ಎರಡು ತಿಂಗಳಿಂದ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರಿಗೆ ಸದ್ಯ ಮನೆಯಿಂದ ಹೊರಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನಾದ್ಯಂತ ಸತತ ಮೂರು ದಿನಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮೂಡಿಗೆರೆಯ ಗ್ರಾಮೀಣ ಭಾಗದಲ್ಲಿ ಎರಡು ದಿನಗಳಿಂದ ಕರೆಂಟ್ ಇಲ್ಲ. ಮೂಲರಹಳ್ಳಿ ಬಳಿ ಗುಡ್ಡ ಕುಸಿದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಬೀಸುತ್ತಿರೋ ರಣ ಗಾಳಿ ಭಯಾನಕತೆ ಸೃಷ್ಟಿಸುತ್ತಿದೆ. ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.
ಮಕ್ಕಳು ಶಾಲೆಗೆ ಹೋಗೋದಕ್ಕೂ ಸಾಧ್ಯವಾಗುತ್ತಿಲ್ಲ. ಜನರಿಗೆ ಮನೆಯಿಂದ ಹೊರಬರಲೂ ಆಗುತ್ತಿಲ್ಲ. ತೋಟ-ಹೊಲ-ಗದ್ದೆಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಮೂರು ದಿನದ ವರುಣನ ರೌದ್ರ ನರ್ತನಕ್ಕೆ ಮಲೆನಾಡು ನಿಜಕ್ಕೂ ಬೆಚ್ಚಿ ಬಿದ್ದಿದೆ.
ಇನ್ನು ಪಶ್ಚಿಮ ಘಟ್ಟಗಳ ಸಾಲು, ಶೃಂಗೇರಿ, ಕಳಸ, ಕೆರೆಕಟ್ಟೆ, ಕುದುರೆಮುಖ ಭಾಗದಲ್ಲಿ ಸುರಿಯತ್ತಿರೋ ಮಹಾಮಳೆಗೆ ತುಂಗಾ-ಭದ್ರೆಯ ಒಡಲು ಕೂಡ ತುಂಬಿದೆ. ಮಳೆ ಜೊತೆ ಬೀಸುತ್ತಿರುವ ಭಾರೀ ಗಾಳಿಯಿಂದ ಮಲೆನಾಡಿನ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕುಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ. ಮೂರೇ ದಿನದ ಮಳೆಗೆ ಕಾಫಿ, ಅಡಿಕೆ, ಮೆಣಸಿಗೆ ರೋಗದ ಭೀತಿ ಶುರುವಾಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ. ಇದೇ ರೀತಿ ನಿರಂತರ ಮಳೆ ಸುರಿದರೆ ಮುಂದೆ ಹೇಗೆ ಎಂದು ಮಲೆನಾಡಿನ ಜನರು ಆತಂಕದಲ್ಲಿ ಇರುವಂತಾಗಿದೆ.