ಚಿಕ್ಕಮಗಳೂರು: ಅಕಾಲಿಕ ಮಳೆಯಿಂದಾಗಿ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ವರ್ಷ ಪೂರ್ತಿ ಬೆಳೆದ ಬೆಳೆ ಒಂದೇ ವಾರಕ್ಕೆ ಮಳೆ ನೀರಲ್ಲಿ ಕೊಚ್ಚಿ ಹೋಗಿ ಜನರ ಬದುಕು ಬರಡಾಗಿದೆ. ಅಕಾಲಿಕ ಮಳೆ (Rain) ನಿಲ್ಲಿಸುವಂತೆ ಶಾಸಕ ರಾಜೇಗೌಡ (MLA Rajegowda) ಮಲೆನಾಡಿನ ಪ್ರಸಿದ್ಧ ಮಳೆ ದೇವರು ಕಿಗ್ಗಾದ ಋುಷ್ಯ ಶೃಂಗನಿಗೆ ( rushyashrunga temple) ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಳೆ ದೇವರೆಂದೇ ಖ್ಯಾತಿ ಹೊಂದಿದೆ ಋಷ್ಯಶೃಂಗ:
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿರುವ ಋಷ್ಯಶೃಂಗ ಮಳೆ ದೇವರೆಂದೇ ಖ್ಯಾತಿ ಹೊಂದಿದೆ. ಬೇಕಾದಾಗ ಮಳೆಯಾಗಿಸಿ, ಬೇಡವಾದಾಗ ನಿಲ್ಲಿಸುವ ಶಕ್ತಿವಂತ ದೇವರು. ಈ ಹಿಂದೆ ರಾಜ್ಯಕ್ಕೆ ಬರಗಾಲ ಆವರಿಸಿದಾಗ ಈ ಋಷ್ಯಶೃಂಗನಿಗೆ ಪೂಜೆ ಸಲ್ಲಿಸಿದ ಮೇಲೆ ರಾಜ್ಯದಲ್ಲಿ ಸಾಕಷ್ಟು ಮಳೆ ಬಂದಿರುವ ಉದಾಹರಣೆ ಇದೆ. ಅಲ್ಲದೇ ಅತಿವೃಷ್ಟಿ ಸಂದರ್ಭದಲ್ಲಿ ಪೂಜೆ ಸಲ್ಲಿಸಿದಾಗ ಮಳೆ ನಿಂತ ಉದಾಹರಣೆಯೂ ಸಾಕಷ್ಟಿದೆ.
ಮಳೆ ನಿಲ್ಲಿಸುವಂತೆ ಋಷ್ಯಶೃಂಗನಿಗೆ ವಿಶೇಷ ಪೂಜೆ:
ಈ ಋಷ್ಯಶೃಂಗ ಆಸ್ಟ್ರೇಲಿಯಾದಲ್ಲಿಯೂ ಮಳೆ ತರಿಸಿದ ದೇವರು. ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚಿಗೆ ಅರಣ್ಯ ನಾಶವಾಗಿ, ಪ್ರಾಣಿ - ಪಕ್ಷಿಗಳು ಸಾವನ್ನಪ್ಪಿದಾಗ ಭಾರತೀಯ ಮೂಲದವರು ಆಸ್ಟ್ರೇಲಿಯಾದಲ್ಲಿ ಮಳೆ ಬರಲೆಂದು ಇಲ್ಲಿ ಪೂಜೆ ಮಾಡಿಸಿದ್ದರು.
ಬಳಿಕ ಅಲ್ಲಿಯೂ ಮಳೆ ಸುರಿದಿತ್ತು. ಸದ್ಯ ಮಲೆನಾಡಲ್ಲಿ ಕಳೆದ ಫೆಬ್ರವರಿಯಿಂದ ನಿರಂತರ ಮಳೆಯಾಗುತ್ತಿದ್ದು, ಬೆಳೆಗಳು ಮಣ್ಣು ಪಾಲಾಗಿ ಜನ ಕಂಗಾಲಾಗಿದ್ದಾರೆ. ಹೀಗಾಗಿ ಮಳೆ ನಿಲ್ಲಿಸುವಂತೆ ಋಷ್ಯಶೃಂಗನಿಗೆ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಅಬ್ಬರಿಸಿಸುತ್ತಿರುವ ಮಳೆ ನಿಲ್ಲಲಿ ಎಂದು ಶಾಸಕರು ಪ್ರಾರ್ಥಿಸಿಕೊಂಡಿದ್ದಾರೆ.
ನೆಲಕಚ್ಚಿದ ಬೆಳೆ:
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 11 ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಆಹಾರ ಬೆಳೆ ಹಾಗೂ ಪ್ರಮುಖ ವಾಣಿಜ್ಯ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕೆಲಭಾಗದಲ್ಲಿ ಕಾಫಿ ಗಿಡದಲ್ಲೇ ಕೊಳೆಯುತ್ತಿದ್ದರೆ, ಹಲವೆಡೆ ನೆಲಕ್ಕುದುರಿದೆ. ನೆಲಕ್ಕುದುರಿರುವ ಕಾಫಿಯನ್ನ ಆಯುವುದಕ್ಕೂ ಮಳೆ ಬಿಡುತ್ತಿಲ್ಲ.
ಇತ್ತ ಅಡಿಕೆ ಕೊಳೆತು ಮಣ್ಣು ಪಾಲಾಗುತ್ತಿದೆ. ಹಾಗಾಗಿ, ಮಲೆನಾಡಿಗರು ಒಲೆ ಮೇಲೆ ಕಾಫಿ, ಅಡಕೆಯನ್ನ ಒಣಗಿಸುವ ಸ್ಥಿತಿ ನಿರ್ಮಾಣವಾಗಿದೆ. ಶೃಂಗೇರಿ, ಕೊಪ್ಪ, ಕಳಸ ಭಾಗದಲ್ಲಿ ಮಳೆ ನೀರಿನ ಜತೆ ಅಡಕೆ ಕೊಚ್ಚಿ ಹೋಗುತ್ತಿದೆ. ಹಾಗಾಗಿ ಮಲೆನಾಡಿಗರು ಮಳೆ ನಿಲ್ಲಿಸು ದೇವಾ ಎಂದು ಋಷ್ಯಶೃಂಗನಿಗೆ ಕೈಮುಗಿದಿದ್ದಾರೆ.
ಶೃಂಗೇರಿಯಿಂದ 9 ಕಿ.ಮೀ ದೂರವಿರುವ ಕಿಗ್ಗದ ಋಷ್ಯಶೃಂಗ ದೇವರಿಗೆ ಮೊರೆಯಿಟ್ಟರೆ ಮಳೆ ನಿಲ್ಲುವುದು ಎಂಬ ಪ್ರತೀತಿ ಇದೆ. ಅಷ್ಟೇ ಅಲ್ಲದೇ ಮಳೆಗಾಲ ಸಮಯದಲ್ಲಿ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬರಲಿ ಎಂದು ದೇವಾಲಯಕ್ಕೆ ಸ್ಥಳೀಯರು ಪೂಜೆ ಸಲ್ಲಿಸುತ್ತಾರೆ.
ಇದನ್ನೂ ಓದಿ: ಮಕ್ಕಳೇ ಚಿಂತೆ ಬೇಡ..ದ್ವಿತೀಯ ಪಿಯು ಅರ್ಧವಾರ್ಷಿಕ ಪರೀಕ್ಷೆ ಮುಂದೂಡಲು ಶಿಕ್ಷಣ ಇಲಾಖೆ ತೀರ್ಮಾನ ಸಾಧ್ಯತೆ