ಚಿಕ್ಕಮಗಳೂರು: ಕಾಶ್ಮೀರಿ ಪಂಡಿತರಿಗೆ ಶೃಂಗೇರಿ ಶ್ರೀ ಮಠದಿಂದ ಕಾಶ್ಮೀರ ಪುರವಾಸಿನಿ ಶಾರದೆಯ ನೂತನ ವಿಗ್ರಹವನ್ನು ವಿಜಯ ದಶಮಿಯ ಶುಭ ದಿನವಾದ ಬುಧವಾರ ಹಸ್ತಾಂತರಿಸಲಾಯಿತು.
ಶೃಂಗೇರಿ ಮಠದ ಉಭಯ ಶ್ರೀಗಳಾದ ಶ್ರೀ ಭಾರತೀ ತೀರ್ಥರು ಮತ್ತು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ನೂತನ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಕಾಶ್ಮೀರಿ ಪಂಡಿತರೂ ಆದಿಶಕ್ತಿ ನೆಲದ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.
ಶೃಂಗೇರಿಯಿಂದ ಕಾಶ್ಮೀರದ ನೀಲಂಕಣಿವೆಯ ತ್ರೀತ್ವಾಲ್ಗೆ ಶಾರದೆಯ ವಿಗ್ರಹ ತೆಗೆದುಕೊಂಡು ಹೋಗಲಾಗುತ್ತಿದ್ದು, ಮುಂದಿನ ವರ್ಷ ಸಂಕ್ರಾಂತಿಯ ನಂತರ ಉತ್ತರಾಯಣ ಸಮಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಶಂಕರಾಚಾರ್ಯರು ಸರ್ವಜ್ಞ ಪೀಠಾರೋಹಣ ಮಾಡಿದ ಕಾಶ್ಮೀರಕ್ಕೆ ಈ ವಿಗ್ರಹ ಹೋಗಲಿದೆ. ಮೂಲ ಸ್ಥಳ ಪಿಒಕೆಯಲ್ಲಿದ್ದು, ಬದಲಿಯಾಗಿ ತ್ರೀತ್ವಾಲ್ನಲ್ಲಿ ನೂತನ ಶ್ರೀ ಶಾರದ ಪೀಠ ನಿರ್ಮಾಣ ಹಂತದ ಕಾರ್ಯ ಭರದಿಂದ ಸಾಗಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಶಾರದೆ ದೇಗುಲ : ಶೃಂಗೇರಿಯ ಮೂಲವಿಗ್ರಹದ ಪ್ರತಿಕೃತಿ ನೀಡಲು ಒಪ್ಪಿಗೆ
ಶಾರದೆಗೆ ಇಂದಿಗೂ ಕಾಶ್ಮೀರ ಪುರವಾಸಿನಿ ಅಂತಾನೇ ಕರೆಯಲಾಗುತ್ತದೆ. ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ಶಾರದೆ ನೆಲೆಸಲಿದ್ದು, ಭಕ್ತರಲ್ಲಿ ಸಂತಸ ಮನೆ ಮಾಡಿದೆ.