ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಇಂದು ರಾತ್ರಿ ವೇಳೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಇನ್ನೂ ಎರಡೂ ದಿನಗಳ ಕಾಲ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಶೃಂಗೇರಿ ಮಠಕ್ಕೆ ಆಗಮಿಸಿದ್ದಾರೆ. ಮಠದ ಯಾಗ ಶಾಲೆಯಲ್ಲಿ ಚಂಡಿಕಾಯಾಗ ನಡೆಸಿ ಅಲ್ಲಿಯೇ ಮೂರು ದಿನಗಳಿಂದಾ ವಾಸ್ತವ್ಯ ಹೂಡಿದ್ದಾರೆ.
ಮಂಗಳವಾರ ಯಾಗ ಶಾಲೆಯಲ್ಲಿ ಚಂಡಿಕಾಯಾಗದ ಪೂರ್ಣಾಹುತಿ ಇರುವ ಕಾರಣದಿಂದ ಇಂದು ರಾತ್ರಿಯೇ ಹೆಚ್‌ಡಿಕೆ ಶೃಂಗೇರಿಗೆ ಆಗಮಿಸುತ್ತಿದ್ದಾರೆ. ನಾಳೆ ಮತ್ತು ನಾಡಿದ್ದು ನಡೆಯುವ ಯಾಗದಲ್ಲಿ ಭಾಗವಹಿಸಲಿದ್ದಾರೆ. ಪೂಜೆಯ ನಂತರ ಕೊಪ್ಪ ತಾಲೂಕಿನ ಗುಡ್ಡೇ ತೋಟದಲ್ಲಿ ಹೆಚ್‌ಡಿಕೆ ಉಳಿಯಲಿದ್ದಾರೆ. ಮಂಗಳವಾರ ಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮಗಳು ಮುಗಿದ ನಂತರ ಮಂಗಳೂರಿನ ಕಡೆ ಪ್ರವಾಸ ಕೈಗೊಳ್ಳಲಿದ್ದಾರೆ.