ಚಿಕ್ಕಮಗಳೂರು: ಎಂ.ಕೆ.ಪ್ರಾಣೇಶ್ ಅವರು ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾದ ನಂತರ ಮೂಡಿಗೆರೆ ತಾಲೂಕಿಗೆ ಮಂಗಳವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಪ್ರಾಣೇಶ್ ಆಗಮಿಸುತ್ತಿದ್ದಂತೆ ಜೈಕಾರ ಹಾಕಿ ಸಂಭ್ರಮಿಸಿದರು. ಹೂವಿನ ಹಾರ, ಹೂಮಳೆ ಸುರಿಸಿ ಅಭಿಮಾನ ಮೆರೆದರು.
ನಂತರ ಮೂಡಿಗೆರೆಯ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲು ಪ್ರಾಣೇಶ್‌ರನ್ನು ಹೊತ್ತು ಸಾಗಿದರು. ಪಕ್ಷದ ಕಾರ್ಯಕರ್ತರು ಮತ್ತು ಪ್ರಾಣೇಶ್ ಅನುಯಾಯಿಗಳು ತಮಟೆ ಸದ್ದಿಗೆ ಕುಣಿದರು. ಇದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಜಯ. ನಾನು ಕಾರ್ಯಕರ್ತರೊಂದಿಗೆ ನಡಿಗೆಯಲ್ಲಿ ಸಾಗುತ್ತೇನೆಂದು ಹೇಳಿ ರಥದಿಂದ ಕೆಳಗಿಳಿದ ಅವರು ಮೆರವಣಿಗೆಯಲ್ಲಿ ಸಾಗಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು, ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಪ್ರಮುಖ ಪದಾಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪ್ರಾಣೇಶ್‌ಗೆ ಶುಭಕೋರಿದರು.
ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆ: ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸಭಾಪತಿ ಅವಿರೋಧ ಆಯ್ಕೆ ಬೆನ್ನಲ್ಲೇ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಬಿಜೆಪಿ ಪಕ್ಷದಿಂದ ಎಂ.ಕೆ.ಪ್ರಾಣೇಶ್ ಮತ್ತು ಕಾಂಗ್ರೆಸ್ ಪಕ್ಷದಿಂದ ಅರವಿಂದ್ ಕುಮಾರ್ ನಡುವೆ ಸ್ಪರ್ಧೆ ಏರ್ಪಟಿತ್ತು. ಒಟ್ಟು 75 ಸದ್ಯಸ ಬಲ ಹೊಂದಿರುವ ಪರಿಷತ್ನಲ್ಲಿ ಅಂತಿಮವಾಗಿ ಪ್ರಾಣೇಶ್ 39 ಪರ ಮತಗಳು ಮತ್ತು 29 ವಿರುದ್ಧ ಮತಗಳನ್ನು ಪಡೆದುಕೊಂಡು ಉಪ ಸಭಾಪತಿ ಸ್ಥಾನಕ್ಕೆ ಎರಡನೇ ಬಾರಿಗೆ ಆಯ್ಕೆಯಾದರು.
ಇದನ್ನೂ ಓದಿ: ಚಿಕ್ಕಮಗಳೂರು ಶಾಸಕ ಸಿ ಟಿ ರವಿ ವಿರುದ್ಧ ಹೆಚ್ಡಿ ತಮ್ಮಯ್ಯ ಬಂಡಾಯ