ಚಿಕ್ಕಮಗಳೂರು: ಗ್ರಾಮ ಪಂಚಾಯತ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮನವಿಗೆ ಅಧಿಕಾರಿಗಳು ಒಪ್ಪಿಗೆ ಸೂಚಿಸುತ್ತಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡತೋಟ ಗ್ರಾಮ ಪಂಚಾಯಿತಿಯ 10 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿ 10 ಸದಸ್ಯರು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಗಲೀಕರಣ, ಲೇಔಟ್ ನಿರ್ಮಾಣ, ಮಳೆಯಿಂದ ಕುಸಿದ 17 ಮನೆಗಳ ಸ್ಥಳಾಂತರ ಮುಂತಾದ ಕಾರ್ಯಗಳಿಗೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಾಧ್ಯವಾಗದ ಕಾರಣ ಅಧಿಕಾರಿಗಳ ವರ್ತನೆಯಿಂದ ಮನನೊಂದು ರಾಜೀನಾಮೆ ಸಲ್ಲಿಸಲಾಗಿದೆ. ನಿಮ್ಮ ನಿರ್ಲಕ್ಷ್ಯಕ್ಕೆ ನಮ್ಮ ಉತ್ತರ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಾಲೂಕು ಪಂಚಾಯಿತಿ ಇಒಗೆ ರಾಜೀನಾಮೆ ಪತ್ರವನ್ನು ಗ್ರಾಮ ಪಂಚಾಯಿತಿ ಸದಸ್ಯರು ನೀಡಿದ್ದಾರೆ.
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಾಣೆ; ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ 7 ಕೋಟಿ ಮೌಲ್ಯದ ಬಂಗಾರ ವಶಕ್ಕೆ
ಜಿಲ್ಲೆಯ ವಿವಿಧೆಡೆ ಪೊಲೀಸ್ ದಾಳಿ, ಐವತ್ತಕ್ಕೂ ಹೆಚ್ಚು ಅಕ್ರಮ ಬಂದೂಕು ವಶ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣದ ನಂತರ ಎಚ್ಚೆತ್ತು ಕೊಂಡಿರುವ ಪೊಲೀಸ್ ಇಲಾಖೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಂದೂಕು ದುರಸ್ತಿಪಡಿಸುವ ಅಂಗಡಿಗಳಿಗೆ ದಾಳಿ ನಡೆಸಿ ಭಾರಿ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ಪತ್ತೆ ಹಚ್ಚಿದ್ದು ಆರು ಜನರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಬಾಳೂರು, ಕಳಸ ಹಾಗು ನರಸಿಂಹರಾಜ ಪುರ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ. ಪರವಾನಗಿ ರಹಿತ 41 , ಪರವಾನಗಿ ಸಹಿತ 10 ಬಂದೂಕು, 2 ರಿವಾಲ್ವರ್, 22 ರೈಫಲ್ ಗುಂಡು, 40 ಬುಕ್ ಶಾಟ್ ಗುಂಡು, ಬಂದೂಕು ನಳಿಕೆ, ಕಾರ್ಟ್ರೆಜ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಸಂಬಂಧ ನೇತ್ರಕುಂಡ ಎಸ್ಟೇಟಿನ ಸದಾಶಿವಾಚಾರ್, ಬಾಳೂರಿನ ಸುಧಾಕರ್ ಆಚಾರಿ, ಬಾಳೆಹೊನ್ನೂರಿನ ರಾಮಚಂದ್ರ ಆಚಾರಿ, ಮಾವಿನಕೆರೆಯ ಸುಂದರ, ಗಂಗಾಧರ, ಆಡುವಳ್ಳಿಯ ಶಿವರಜ್ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಖಾಂಡ್ಯ ಸಮೀಪದ ಬಿದಿರೆ ಎಂಬಲ್ಲಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರು ಅಮಾಯಕ ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ರಮೇಶ್ ಎಂಬಾತ ಈ ಕೃತ್ಯ ನಡೆಸಿದ್ದ. ಆತನು ಅಕ್ರಮ ಬಂದೂಕು ಬಳಸಿ ಬಿದಿರೆ ಗ್ರಾಮದಲ್ಲಿ ಬೈಕಿನಲ್ಲಿ ಸಾಗುತ್ತಿದ್ದ ಪ್ರವೀಣ್ ಮತ್ತು ಪ್ರಕಾಶ್ ಎಂಬ ಇಬ್ಬರು ಯುವಕರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದ.
ಜಿಲ್ಲೆಯಲ್ಲಿ ಪರವಾನಗಿ ರಹಿತ ಬಂದೂಕು ವ್ಯಾಪಕ ಪ್ರಮಾಣದಲ್ಲಿದ್ದು, ಅನೇಕ ಮಂದಿ ಬಂದೂಕು ದುರಸ್ತಿ ಅಂಗಡಿಯವರು ತಾವೇ ಸ್ಥಳೀಯವಾಗಿ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಬಂದಿರುವ ಮಾಹಿತಿ ಆಧರಿಸಿ ವಿವಿದೆಡೆ ದಾಳಿ ನಡೆಸಿ ಅಕ್ರಮ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಗುಂಡಿನ ದಾಳಿ.. ಬೈಕ್ನಲ್ಲಿ ಹೋಗುತ್ತಿದ್ದವರ ಮೇಲೆ ಶೂಟೌಟ್, ಇಬ್ಬರು ಸ್ಥಳದಲ್ಲೇ ಸಾವು