ಚಿಕ್ಕಮಗಳೂರು: ರಾಜ್ಯದ ಮೊಟ್ಟ ಮೊದಲ ಗೋಶಾಲೆಯನ್ನು ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಕಡೂರು ತಾಲೂಕಿನ ಎಮ್ಮೆದೊಡ್ಡಿ ಎಂಬ ಗ್ರಾಮದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಇಂದು ಈ ಸರ್ಕಾರಿ ಗೋಶಾಲೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಒಂದು ಸರ್ಕಾರಿ ಗೋಶಾಲೆಯನ್ನು ನಿರ್ಮಾಣ ಮಾಡುವುದಾಗಿ ಈ ಹಿಂದೆ ಬಜೆಟ್ನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಸಚಿವ ಪ್ರಭು ಚೌಹಾಣ್ ಲೋಕಾರ್ಪಣೆಗೊಳಿಸಲಿದ್ದಾರೆ.
ಸುಮಾರು 53 ಲಕ್ಷ ರೂ. ವೆಚ್ಚದಲ್ಲಿ ಈ ಗೋಶಾಲೆಯನ್ನು ನಿರ್ಮಾಣ ಮಾಡಲಾಗಿದ್ದು, 200ಕ್ಕೂ ಹೆಚ್ಚು ಜಾನುವಾರುಗಳಿಗೆ ಈ ಜಾಗ ಆಶ್ರಯ ನೀಡುವ ತಾಣವಾಗಿದೆ. ಬಿಡಾಡಿ ಜಾನುವಾರುಗಳು ಹಾಗೂ ರೈತರಿಗೆ ಸಾಕಲು ಕಷ್ಟವಾಗುವ ಜಾನುವಾರುಗಳು ಹಾಗೂ ವಿವಿಧ ಪ್ರಕರಣಗಳಲ್ಲಿ ದಾಳಿ ಮಾಡಿ ವಶಪಡಿಸಿಕೊಂಡ ಜಾನುವಾರುಗಳನ್ನು ಇಲ್ಲಿ ತಂದು ಪೋಷಣೆ ಮಾಡಬಹುದಾಗಿದೆ.
ಸುಮಾರು ಎರಡು ಎಕರೆ ಪ್ರದೇಶದಲ್ಲಿ ಈ ಗೋಶಾಲೆ ನಿರ್ಮಾಣವಾಗಿದ್ದು, ಎಂಟು ಎಕರೆ ಪ್ರದೇಶದಲ್ಲಿ ಮೇವು ಬೆಳೆಯಲು ಜಾಗ ಮೀಸಲಿರಿಸಲಾಗಿದೆ. 11,000 ಸಾವಿರ ರೂ. ಸಂದಾಯ ಮಾಡಿ ಒಂದು ವರ್ಷ ಅವಧಿಗೆ ಒಂದು ಗೋವನ್ನು ದತ್ತು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ತಡೆದು ನಿಲ್ಲಿಸದಿರಿ.. ಪ್ರವೀಣ್ ಸೂದ್ ಸೂಚನೆ