ಚಿಕ್ಕಮಗಳೂರು: 100 ಬೆಡ್ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಬಂದ್ಗೆ ಕರೆ ಕೊಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗಿನ ಸ್ವಯಂಪ್ರೇರಿತ ಬಂದ್ಗೆ ವ್ಯಾಪಕ ಬೆಂಬಲ ದೊರೆತಿದ್ದು, ಶೃಂಗೇರಿ ಸಂಪೂರ್ಣ ಸ್ತಬ್ಧವಾಗಿದೆ.
ಶೃಂಗೇರಿಯಲ್ಲಿ 14 ವರ್ಷಗಳಿಂದ ಸುಸಜ್ಜಿತ ಆಸ್ಪತ್ರೆಗಾಗಿ ಜನರು ಮನವಿ ಮಾಡುತ್ತಿದ್ದಾರೆ. ಇದೀಗ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯಿಂದ ಬಂದ್ಗೆ ಕರೆ ನೀಡಲಾಗಿದೆ. ಈ ಮೂಲಕ ಸೂಕ್ತ ಆಸ್ಪತ್ರೆ ವ್ಯವಸ್ಥೆಗೆ ಆಗ್ರಹಿಸಲಾಗಿದ್ದು, ಪ್ರವಾಸಿಗರು ಹಾಗೂ ಭಕ್ತರು ಇಂದು ಶೃಂಗೇರಿಗೆ ಬರದಂತೆ ಮನವಿ ಮಾಡಲಾಗಿದೆ.
ಬಂದ್ಗೆ ಸ್ಥಳೀಯರು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ಹೊರ ಭಾಗಗಳಲ್ಲಿ ಬಸ್ಸುಗಳನ್ನು ಅಡ್ಡ ಹಾಕಿ ಗ್ರಾಮಸ್ಥರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣ ಹಾಗೂ ಗ್ರಾಮಾಂತರ ಭಾಗ ಸಂಪೂರ್ಣ ಸ್ತಬ್ಧವಾಗಿದ್ದು, 35ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ಗೆ ಬೆಂಬಲ ಸಿಗುತ್ತಿದೆ.
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ: ತುಮಕೂರು ಬಂದ್ಗೆ ಉತ್ತಮ ಪ್ರತಿಕ್ರಿಯೆ
ಮೆಡಿಕಲ್ ಶಾಪ್ಗಳಲ್ಲೂ ಅರ್ಧ ಬಾಗಿಲು ಹಾಕಿ ಮಾಲೀಕರು ಈ ಬಂದ್ಗೆ ಬೆಂಬಲ ಸೂಚಿಸುತ್ತಿದ್ದಾರೆ. ಶೃಂಗೇರಿ ತಾಲೂಕಿನ ಕುಂಚೇಬೈಲು, ಬಿದರಗೋಡು, ಅಗಳಗಂಡಿ, ನೆಮ್ಮಾರು, ಕಿಗ್ಗ ಇನ್ನಿತರೆ ಹಳ್ಳಿಗಳಲ್ಲೂ ಅಂಗಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ.