ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕೃಷಿ ಚಟುವಟಿಕೆಗಳು ಕಾರ್ಯಾರಂಭಗೊಂಡಿದ್ದು, ಯಾವುದೇ ಭಾಗದಲ್ಲೂ ರಸಗೊಬ್ಬರದ ಸಮಸ್ಯೆಯಾಗದಂತೆ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ. ನರೇಂದ್ರ ಹೇಳಿದ್ದಾರೆ.
ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಜಿಲ್ಲೆಯಾದ್ಯಾಂತ ಈ ಬಾರಿ ಉತ್ತಮ ಮಳೆಯಾಗಿದ್ದು ಕೃಷಿ ಬಿತ್ತನೆ ಕಾರ್ಯಗಳು ಆರಂಭವಾಗಿದೆ, ಕೆಲವೆಡೆ ಬೆಳೆ ಹಾನಿಯಾಗಿ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದ್ದು ಸಮೀಕ್ಷೆ ನಡೆಸಿ ಸೂಕ್ತ ಬೆಳೆ ಪರಿಹಾರ ನೀಡಬೇಕು, ಅಲ್ಲದೇ ಯಾವುದೇ ಭಾಗದ ರೈತರಿಗೂ ರಸಗೊಬ್ಬರದ ಸಮಸ್ಯೆಯಾಗದಂತೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇರಿಸಿಕೊಳ್ಳಬೇಕು ಎಂದು ಹೇಳಿದರು.
ಪಶು ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈ ಬಾರಿಯ ಪ್ರವಾಹದಿಂದಾಗಿ ಒಟ್ಟು 12 ಜಾನುವಾರುಗಳು ಸಾವನ್ನಪ್ಪಿದ್ದು ಪರಿಹಾರ ವಿತರಿಸಲಾಗಿದೆ. ಕಾಲುಬಾಯಿ ರೋಗಕ್ಕೆ ಸಂಬಂಧಿಸಿದಂತೆ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಲಸಿಕೆ ನೀಡುವ ಕಾರ್ಯ ಕೈಗೊಳ್ಳಲಾಗವುದು ಜಾನುವಾರುಗಳಿಗೆ ಉಚಿತವಾಗಿ ವಿಮೆ ಸೌಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಶು ಇಲಾಖೆ ಅಧಿಕಾರಿ ಪದ್ಮೇಗೌಡ ಸಭೆಯಲ್ಲಿ ಮಾಹಿತಿ ನೀಡಿದರು.
ಬೆಳೆ ಸಾಲದ ಮಾದರಿಯಲ್ಲೇ ಈಗಾಗಲೇ ಇರುವ ಸಾಕು ಪ್ರಾಣಿಗಳಾದ ಎಮ್ಮೆ, ಹಸು, ಸೇರಿದಂತೆ ಹಲವು ಪಶುಗಳ ನಿರ್ವಹಣೆಗಾಗಿ ಪಶು ಇಲಾಖೆಯಿಂದ ಎಮ್ಮೆಗಳಿಗೆ 14 ಸಾವಿರ ಹಾಗೂ ಹಸುಗಳಿಗೆ 12 ಸಾವಿರ ರೂ ಸಹಾಯಧನ ನೀಡಲಾಗುತ್ತಿದೆ, ಮುದ್ರಾ ಯೋಜನೆಯಲ್ಲಿ ಸಣ್ಣ ಗುಡಿ ಕೈಗಾರಿಕೆಗಳ ಅಭಿವೃದ್ಧಿಗಾಗಿ 3 ಹಂತಗಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.