ಚಿಕ್ಕಮಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕೂ ಪೂರ್ವದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಇದು ನಾಯಕರು, ಮುಖಂಡರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಸಾಮಾನ್ಯವಾಗಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಕ್ಕೆ ಮನೆಗೆ ನುಗ್ಗಿ ಕಾರ್ಯಕರ್ತನಿಗೆ ಮಾರಣಾಂತಿಕ ಹಲ್ಲೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿರುವಂತಹ ಗಂಭೀರ ಆರೋಪ ಕೇಳಿ ಬಂದಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡು ಬಂದಿವೆ. ರಾಜಕೀಯ ಪಕ್ಷಗಳು ತಮ್ಮದೇಯಾದ ತಂತ್ರಗಾರಿಕೆಯೊಂದಿಗೆ ಚುನಾವಣಾ ಪ್ರಚಾರದಲ್ಲಿವೆ.
ಹಾಗೆಯೇ ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸಾಮಾನ್ಯವಾಗಿರುತ್ತೆ. ಅದರಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತನೊಬ್ಬನಿಗೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ನಾಗಲಾಪುರ ಸಮೀಪದ ರಾವುರು ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಶಿವು ಕಳೆದ ತಿಂಗಳು ಕಾಂಗ್ರೆಸ್ ತೊರೆದು ಕೇಸರಿ ಪಡೆ ಸೇರಿದ್ದರು. ಇದು ಕಾಂಗ್ರೆಸ್ನವರ ಕಣ್ಣು ಕೆಂಪಗಾಗಿಸಿತ್ತು ಎನ್ನಲಾಗ್ತಿದೆ. ಬಿಜೆಪಿ ಸೇರಿದ ವಿಚಾರವಾಗಿ ಈ ಹಿಂದೆ ಶಿವು ಜೊತೆ ಶಾಸಕರ ಹಿಂಬಾಲಕರು ಗಲಾಟೆ ಕೂಡ ಮಾಡಿದ್ದರಂತೆ. ಅದರೇ ಬುಧವಾರ ಮನೆಗೆ ನಾಲ್ಕು ಜನರು ನುಗ್ಗಿ ಶಿವು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕೈ ಮೊಳೆ ಮುರಿದು ಗಾಯಾಳು ಶಿವುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪ್ರಾರಂಭಿಸಿರುವ ಪೊಲೀಸರಿಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಿವು ಘಟನೆಯ ಕುರಿತು ಹಾಗೂ ಯಾವ ರೀತಿ ಹಲ್ಲೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಾಸಕರ ಹಿಂಬಾಲಕರು ಹಲ್ಲೆ ನಡೆಸಿದ್ದಾರೆ.. ನನ್ನ ಮೇಲೆ ಕಾಂಗ್ರೆಸ್ ಶಾಸಕರ ಹಿಂಬಾಲಕರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾಗಿರುವ ಬಿಜೆಪಿ ಕಾರ್ಯಕರ್ತ ಶಿವು ಆರೋಪಿಸಿದ್ದಾರೆ. ನಾನು ಮುಂಚೆ ಕಾಂಗ್ರೆಸ್ ಪಾರ್ಟಿಯಲ್ಲಿದ್ದು, ನಂತರ ಕಳೆದ ತಿಂಗಳು ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಪಕ್ಷದ ಮುಖಂಡರ ಜೊತೆಗೆ ಫೋಟೋ ತೆಗಿಸಿಕೊಂಡಿದ್ದೆ. ಈ ಫೋಟೋವನ್ನು ಬಿಜೆಪಿ ಪಕ್ಷ ತನ್ನ ಗ್ರೂಪ್ಗೆ ಮತ್ತು ಫೇಸ್ಬುಕ್ನಲ್ಲಿ ಹಾಕಿತ್ತು. ಇದರಿಂದ ರೊಚ್ಚಿಗೆದ್ದವರು ನನ್ನ ಬಳಿ ಬಂದು ಪಕ್ಷ ತೊರೆಯದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು. ಇದಕ್ಕೆ ನಾನು ಒಪ್ಪಲಿಲ್ಲ. ಇದಾದ ಬಳಿಕ ಮನೆಗೆ ಏಕಾಎಕಿ ನುಗ್ಗಿ ಮರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಶಿವು ದೂರಿದ್ದಾರೆ.
ಇದನ್ನೂ ಓದಿ :ಚಿಕ್ಕಮಗಳೂರು : ಮೂಲ ಸೌಕರ್ಯಕ್ಕೆ ಒತ್ತಾಯಿಸಿ ನಿರಾಶ್ರಿತರಿಂದ ಚುನಾವಣೆ ಬಹಿಷ್ಕಾರ