ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅಡಕೆ, ಕಾಫಿ ತೋಟ ಸೇರಿದಂತೆ ಬಾಳೆ ತೋಟಕ್ಕೂ ನುಗ್ಗಿ ಬೆಳೆಗಳನ್ನೆಲ್ಲಾ ನಾಶಪಡಿಸಿರುವುದು ರೈತರ ನಿದ್ದೆಗೆಡಿಸಿದೆ.
ಮೂಡಿಗೆರೆ ತಾಲೂಕಿನ ಹಳಸೆ, ಕೆಲ್ಲೂರು, ದುಂಡುಗ, ಕುನ್ನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ಹೆಚ್ಚಾಗತೊಡಗಿದ್ದು, ಬೆಳೆದ ಬೆಳೆಗಳೆಲ್ಲವೂ ನೆಲಸಮವಾಗುತ್ತಿದೆ. ಅದಲ್ಲದೇ, ಆನೆಗಳು ಹಿಂಡು ಹಿಂಡಾಗಿಯೇ ಬರುತ್ತಿರುವುದರಿಂದ ಜನರು ಮನೆಯಿಂದ ತಮ್ಮ ತೋಟಗಳಿಗೆ ತೆರಳಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯಾಧಿಕಾರಿಗಳು ಸಹ ಆನೆ ದಾಳಿ ತಪ್ಪಿಸಲು, ಕಾಡಾನೆಗಳನ್ನು ಕಾಡಿಗೆ ಓಡಿಸಲು ಶತಾಯುಗತಾಯ ಪ್ರಯತ್ನಿಸುತ್ತಿದ್ದು, ಇವರ ಶ್ರಮ ವಿಫಲವಾಗುತ್ತಿದೆ. ಕಾಡಾನೆಗಳ ಕಾಟಕ್ಕೆ ಬೇಸತ್ತಿರುವ ಕಾಫಿನಾಡಿನ ಜನತೆ ಅರಣ್ಯ ಇಲಾಖೆಗೆ ಹಿಡಿ ಶಾಪ ಹಾಕುತ್ತಾ ದಿನಕಳೆಯುತ್ತಿದ್ದಾರೆ.