ಚಿಕ್ಕಮಗಳೂರು: ಸಾವಿನ ಮನೆಗೆ ಹೊರಟವರನ್ನು ಅಡ್ಡಗಟ್ಟಿ ಖಾಸಗಿ ಫೈನಾನ್ಸ್ ಕಂಪನಿಯವರು ಕಂತಿನ ಹಣ ಕಟ್ಟಿ ಮುಂದೆ ಹೋಗಿ ಎಂದು ಸಾಲಗಾರರನ್ನು ಹಿಡಿದು ರಸ್ತೆಯ ಮಧ್ಯೆ ನಿಲ್ಲಿಸಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ಕೆಲವರಿಗೆ ಖಾಸಗಿ ಫೈನಾನ್ಸ್ ಕಂಪನಿಯವರು ಮನೆಗೆ ಬಂದು ಸಾಲ ನೀಡಿದ್ದಾರೆ. ಆದರೆ, ಕಾರಣಾಂತರಗಳಿಂದ ಸಾಲ ಕಟ್ಟಲು ಆಗಿಲ್ಲ. ಅದನ್ನು ವಸೂಲಿ ಮಾಡದೇ ಜಾಗ ಖಾಲಿ ಮಾಡಲ್ಲ ಎಂದು ಫೈನಾನ್ಸ್ ಕಂಪನಿಯ ಸಿಬ್ಬಂದಿ ಮಾತಿನ ಜಿದ್ದಿಗೆ ಬಿದ್ದಿದ್ದಾನೆ.
ನಮಗೆ ಸಮಸ್ಯೆ ಇದೆ ಮುಂದಿನ ವಾರ ಕಟ್ಟುತ್ತೇವೆ ಎಂದು ಹೇಳಿದರೂ ಬಿಡದ ಸಿಬ್ಬಂದಿ ಕಾರಿಗೆ ಅಡ್ಡಗಟ್ಟಿ ದುಡ್ಡು ಕಟ್ಟಿ ಇಲ್ಲದಿದ್ದರೇ ಕಾರನ್ನೇ ನನ್ನ ಮೇಲೆ ಹೊಡೆದುಕೊಂಡು ಹೋಗಿ ಎಂದೂ ಹೇಳಿದ್ದಾನೆ. ಸಾಲ ತೆಗೆದುಕೊಂಡವರು ನಮ್ಮ ಮನೆಯಲ್ಲಿ ಸಾವಾಗಿದೆ. ಈಗ ನಮ್ಮ ಹತ್ತಿರ ದುಡ್ಡಿಲ್ಲ ಮುಂದಿನ ವಾರ ಕಟ್ಟುತ್ತೇವೆ. ಡ್ಯೂ ಆದರೂ ಪರ್ವಾಗಿಲ್ಲ ಅದನ್ನೂ ಸೇರಿಸಿ ಕಟ್ಟುತ್ತೇವೆ ಎಂದು ಅಂಗಲಾಚುತ್ತಿದ್ದರೂ, ಇದಕ್ಕೆ ಒಪ್ಪದ ಫೈನಾನ್ಸ್ ಸಿಬ್ಬಂದಿ, ನೀವು ಹಣ ಕಟ್ಟದಿದ್ದರೇ ನನ್ನ ಕೆಲಸ ಹೋಗುತ್ತದೆ. ನನ್ನ ಕುಟುಂಬ ಬೀದಿಗೆ ಬೀಳುತ್ತದೆ. ನಿಮಗೆ ದುಡ್ಡು ಕೊಟ್ಟಿರುವ ತಪ್ಪಿಗೆ ನಾವು ಇವೆಲ್ಲಾ ಅನುಭವಿಸುವಂತಾಗಿದೆ. ಹಣವನ್ನು ಸಂಪೂರ್ಣ ಕಟ್ಟಿ ಎಂದು ಹೇಳುತ್ತಿಲ್ಲ. ಇನ್ನೂ ನಿಮಗೆ ಎರಡು ವರ್ಷ ಕಾಲಾವಕಾಶ ಇದೆ. ಆದರೆ, ಈ ವಾರದ ಕಂತಿನ ಹಣ ಮಾತ್ರ ಕಟ್ಟಿ ಎಂದು ಹೇಳುತ್ತಿದ್ದಾನೆ. ಇಲ್ಲಿ ಸರಿ ಯಾರದ್ದು ತಪ್ಪು ಯಾರದ್ದು ಎಂದು ಹೇಳೋದೇ ಕಷ್ಟಕರವಾಗಿದ್ದು, ಈ ವಿಡಿಯೋ ಸದ್ಯ ಚಿಕ್ಕಮಗಳೂರಿನ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.