ಚಿಕ್ಕಮಗಳೂರು : ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಹುಡುಗಿಯರಿಗೆ ಬಣಕಲ್ ಮೂಲದ ಯುವಕನೊಬ್ಬ ಚಾಕೊಲೇಟ್ ನೀಡಿದ್ದ ಎಂಬ ವಿಚಾರವಾಗಿ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಬಸ್ ನಿಲ್ದಾಣದ ಆವರಣದಲ್ಲಿಯೇ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದು, ಕಾರಿನಲ್ಲಿ ಬಂದ ಯುವಕರ ಗುಂಪೊಂದು ಚಾಕೊಲೇಟ್ ನೀಡಿದ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಿಂದ ಯುವಕರ ಗುಂಪು ಚದುರಿ ಹೋಗಿತ್ತು.
ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆ. ಬಸ್ ಸ್ಟ್ಯಾಂಡ್ನಲ್ಲಿ ಬಸ್ಗಾಗಿ ಕಾದು ನಿಂತಿದ್ದ ನನ್ನ ಮೇಲೆ ಯುವಕರ ಗುಂಪೊಂದು ಅನಾವಶ್ಯಕವಾಗಿ ಹಲ್ಲೆ ಮಾಡಿದೆ ಎಂದು ಹಲ್ಲೆಗೊಳಗಾದ ಯುವಕ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪಿನ ಯುವಕ ಪ್ರತಿ ದೂರು ನೀಡಿದ್ದು, ಬಸ್ಸ್ಟ್ಯಾಂಡ್ನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಚಾಕೊಲೇಟ್ ನೀಡುತ್ತಿರುವುದನ್ನು ಪ್ರಶ್ನಿಸಿ, ಬುದ್ಧಿ ಹೇಳಿದ್ದಕ್ಕೆ ನನ್ನ ಮೇಲೆ ಆ ಯುವಕ ಮತ್ತು ಇತರ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಪ್ರಕರಣ ಬೇರೆ ಬೇರೆ ಆಯಾಮಗಳನ್ನು ಪಡೆಯುವ ಮುನ್ನ ಪೊಲೀಸರು ಎಚ್ಚೆತ್ತುಕೊಂಡಿದ್ದು, ಮುಂಜಾಗ್ರತ ಕ್ರಮ ಜರುಗಿಸಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಸೆಕ್ಷನ್ 143, 144, 148, 149, 324, 325, 504, 506 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕರಿಂದ ಆರೋಪ: ಪಟ್ಟಣಕ್ಕೆ ಹೆಚ್ಚುವರಿ ಪೊಲೀಸ್ ವ್ಯಾನ್ ತರಿಸಿ ಬಸ್ಸ್ಟ್ಯಾಂಡ್ ಸಮೀಪ ನಿಯೋಜಿಸಲಾಗಿದೆ. ಮೂಡಿಗೆರೆ ಬಸ್ ಸ್ಟ್ಯಾಂಡ್ ಸಮೀಪ ಪಡ್ಡೆ ಹುಡುಗರ ಹಾವಳಿ ಹೆಚ್ಚಾಗಿದ್ದು, ಇಂತಹ ಘಟನೆ ನಡೆಯಲು ಕಾರಣವಾಗಿದೆ. ಕೆಲವು ಯುವಕರು ಬಸ್ ಸ್ಟ್ಯಾಂಡ್ ಒಳಗೆ ಮತ್ತು ಹೊರಗೆ ಅನಾವಶ್ಯಕವಾಗಿ ತಿರುಗಾಡುತ್ತ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ.
ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ: ಬಸ್ ಸ್ಟ್ಯಾಂಡ್ ಸುತ್ತಮುತ್ತ ಅನಾವಶ್ಯಕವಾಗಿ ತಿರುಗಾಡುವ ಪಡ್ಡೆ ಹುಡುಗರ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಬಿಗಿ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಯುವಕರ ನಡುವೆ ನಡೆದಿರುವ ಗಲಾಟೆ ಪ್ರಕರಣದಲ್ಲಿ ಎರಡೂ ಕಡೆಯಿಂದ ದೂರು ದಾಖಲಿಸಲಾಗಿದೆ. ಎರಡು ಗುಂಪಿನ ಯುವಕರ ನಡುವೆ ನಡೆದಿದ್ದ ಗಲಾಟೆಯಿಂದ ಪಟ್ಟಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಅಲ್ಲದೇ ಮೂಡಿಗೆರೆ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ : ರಸ್ತೆಯಲ್ಲೇ ಬಡಿದಾಡಿಕೊಂಡ ಬ್ರೋಕರ್-ಅಂಗಡಿ ಮಾಲೀಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ