ಚಿಕ್ಕಮಗಳೂರು : ರೈತ ದೇಶದ ಬೆನ್ನೆಲುಬು. ಆತ ಭೂಮಿ ಉಳುಮೆ ಮಾಡಿದರೆ ಹೊಟ್ಟೆಗೆ ಅನ್ನ. ಅಂತಹ ರೈತನೇ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಳೆ ನಂಬಿ ಬಿತ್ತನೆ ಮಾಡಿದ ಬೀಜಗಳು ಭೂಮಿಯಲ್ಲಿ ಕರಗಿ ಹೋಗುತ್ತಿವೆ. ಇತ್ತ ಮಳೆಯೂ ಇಲ್ಲ, ಅತ್ತ ಬೆಳೆಯೂ ಇಲ್ಲದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.
ಮುಂಗಾರು ಮಳೆ ನಿರೀಕ್ಷೆಯಿಂದ ಎಲ್ಲೆಡೆ ಬಿತ್ತನೆ ಕಾರ್ಯ ಜೋರಾಗಿದೆ. ಬಿತ್ತನೆ ಕಾರ್ಯ ಶುರು ಮಾಡಿ ಈಗಾಗಲೇ ಒಂದು ತಿಂಗಳು ಕಳೆದಿದೆ. ಸಾಲ ಮಾಡಿ ತಂದು ಬಿತ್ತಿರುವ ಬೀಜಗಳು ಮಳೆಯಿಲ್ಲದೇ ಹಾಳಾಗುತ್ತಿವೆ ಎನ್ನುತ್ತಿದ್ದಾರೆ ರೈತರು.
ಈಗಾಗಲೇ ಸುರಿದಿರುವ ಅಲ್ಪಸ್ವಲ್ಪ ಬೆಳೆ ಕೈಗೆ ಸಿಗದಂತಾಗಿದೆ. ಬೆಳೆಯ ಬೆಳವಣಿಗೆ ಇಲ್ಲದೆ ಬಿತ್ತನೆ ಮಾಡಿದ ಬೆಳೆಗೆ ನೀರು ಸಿಂಪಡಿಸಲಾಗದೇ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಜಿಲ್ಲೆಯ ಬೀಕನಹಳ್ಳಿ, ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಕಣಿವೆ ಹಾಗು ಹಿರೇಗೌಜ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಮಳೆ ನಂಬಿ ಬಟಾಣಿ, ಆಲೂಗಡ್ಡೆ, ಬೀನ್ಸ್, ಮೆಣಸಿನಕಾಯಿ ಸೇರಿದಂತೆ ಹತ್ತಾರು ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು.
ಬೀಕನಹಳ್ಳಿಯಲ್ಲಿ ರೈತರು ಮಳೆ ನಂಬಿ ಸಾವಿರಾರು ಎಕರೆಯಲ್ಲಿ ಬಟಾಣಿ ಹಾಗೂ ಆಲೂಗೆಡ್ಡೆ ಬಿತ್ತಿದ್ದರು. ಬಿತ್ತಿದ ದಿನದಿಂದ ಈವರೆಗೂ ಒಂದು ದಿನವೂ ಮಳೆ ಸುರಿದಿಲ್ಲ. ಹಾಗಾಗಿ ನೀರು ಕಾಣದ ಭೂಮಿ ಬಿರುಕು ಬಿಡುತ್ತಿದೆ. ಬಿತ್ತಿದ ಬೆಳೆಗಳು ಭುವಿಯೊಡಲು ಸೇರುತ್ತಿವೆ. ಒಂದು ವೇಳೆ ಈ ವಾರ ಮಳೆ ಬಾರದೇ ಹೋದರೆ ಸಾವಿರಾರು ಎಕರೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ನಾಶವಾಗುವ ಆತಂಕ ಜನರದ್ದು.
"ಜಮೀನಿನಲ್ಲಿ ಬಟಾಣಿ ಬಿತ್ತಿ ಒಂದೂವರೆ ತಿಂಗಳಾಯ್ತು. ಯಾವತ್ತೋ ಮಳೆ ಬರುತ್ತೆ ಅಂತ ಹಾಕಿ ಹೋದ್ವಿ. ಆದ್ರೀಗ ಎಲ್ಲವೂ ಒಣಗಿ ಹೋಗುತ್ತಿದೆ. ಇವತ್ತು ಮಳೆ ಬಂದ್ರೂನೂ ಏನೂ ಪ್ರಯೋಜನ ಆಗಲ್ಲ. ನಾವು ಕಳೆದ ಮೂರು ದಿನದಿಂದ ಇವತ್ತು ಮಳೆಯಾಗುತ್ತೆ ಅಂತಾ ಆಗಸ ನೋಡುತ್ತಿದ್ದೇವೆ. ಇವತ್ತು ಎಲ್ಲೋ ಮೋಡ ಕಟ್ಟಿದೆ. ಆದರೆ ಧರೆಗಿಳಿಯುತ್ತಿಲ್ಲ" ಎಂದು ರೈತರೊಬ್ಬರು ಬೇಸರದಿಂದ ನುಡಿದರು.
ಪರಿಹಾರಕ್ಕೆ ಬೇಡಿಕೆ: ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಯಾರೂ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಮಳೆ ಬಾರದೇ ಬೆಳೆ ನಷ್ಟವಾಗುತ್ತಿರುವುದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿ ಅನ್ನೋದು ರೈತರ ಒತ್ತಾಯ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾರಿ ಮಳೆ : ರೈಲು ನಿಲ್ದಾಣದಲ್ಲಿ ನೀರು ಸೋರಿಕೆ.. ರಸ್ತೆಗಳು ಜಲಾವೃತ