ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಜನರ ನಿದ್ದೆಗೆಡಿಸಿದ್ದ ಪುಂಡಾನೆ ಭೈರನನ್ನು ಹರಸಾಹಸ ಪಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಇದಾದ ಕೆಲ ದಿನಗಳಲ್ಲೇ ಮತ್ತೊಂದು ಕಾಡಾನೆ ಜನರ ಕಣ್ಣಿಗೆ ಬಿದ್ದಿತ್ತು. ಆಗ ಇದೇ ಭೈರ. ಅರಣ್ಯ ಇಲಾಖೆ ಹಿಡಿದಿರುವುದು ಪುಂಡಾನೆ ಭೈರ ಅಲ್ಲ ಎಂಬ ಶಂಕೆಯನ್ನು ಜನರು ವ್ಯಕ್ತಪಡಿಸಿದ್ದರು.
ಹೌದು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ರೈತರು ಹೈರಾಣಾಗಿದ್ದು, ಸಾವು ನೋವುಗಳ ಸಂಖ್ಯೆ ಏರುತ್ತಲೇ ಇದೆ. ಕಾಡು ಪ್ರಾಣಿಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಮತ್ತು ಪ್ರಾಣ ಹಾನಿಗಳು ಸಂಭವಿಸುತ್ತಿವೆ. ಇದೆಲ್ಲದರ ನಡುವೆ ಶನಿವಾರ ಬೆಳೆ ಕಾಯಲು ಹೋಗಿದ್ದ ರೈತರೋರ್ವರು ಆನೆ ತುಳಿತದಿಂದ ಮೃತಪಟ್ಟಿದ್ದಾರೆ.
ಈ ಮೂಲಕ ಕಾಡಾನೆ ಕಾಫಿನಾಡಿನಲ್ಲಿ ಮತ್ತೊಂದು ರೈತನನ್ನು ಬಲಿ ಪಡೆದಿದೆ. ಜಮೀನಿನಲ್ಲಿ ರಾಗಿ ಫಸಲು ಕಾಯುತ್ತ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಆನೆ ಏಕಾಏಕಿ ದಾಳಿ ಮಾಡಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ
ಗುಡಿಸಲು ಮೇಲೆ ಆನೆ ದಾಳಿ: ಈರಪ್ಪ (60) ಕಾಡಾನೆ ದಾಳಿಯಿಂದ ಮೃತಪಟ್ಟಿರುವ ರೈತರಾಗಿದ್ದಾರೆ. ಈರಪ್ಪ ತಮ್ಮ ಹೊಲದಲ್ಲಿ ರಾಗಿ ಬೆಳೆದಿದ್ದರು. ಹಾಗಾಗಿ ಅವರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸುವ ಸಲುವಾಗಿ ಕಾವಲು ಕಾಯಲು ಹೋಗಿದ್ದರು. ರಾತ್ರಿ ಇಡೀ ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ಮಲಗುತ್ತಿದ್ದರು. ಈ ವೇಳೆ ಗುಡಿಸಲಿನ ಮೇಲೆ ದಿಢೀರ್ ದಾಳಿ ನಡೆಸಿದ ಕಾಡಾನೆ ಗುಡಿಸಲು ಧ್ವಂಸ ಮಾಡಿ, ರೈತ ಈರಪ್ಪನನ್ನು ಅಡಿಕೆ ಗಿಡಗಳನ್ನು ಬೆಳೆದಿದ್ದ ಹೊಲಕ್ಕೆ ಎಳೆ ತಂದು ತುಳಿದು ಸಾಯಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ: ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಯಲ್ಲಿ ಈ ಬಾರಿ ಕಾಡಾನೆಗಳ ದಾಳಿ ಹೆಚ್ಚಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕೊಂದರಲ್ಲೇ ಕಾಡಾನೆ ದಾಳಿಗೆ 6 ಮಂದಿ ಬಲಿಯಾಗಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ
ಪರಿಹಾರಕ್ಕೆ ಆಗ್ರಹ: ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕಾಡಾನೆಗಳ ಸೆರೆ ಕಾರ್ಯಾಚರಣೆ ನಡೆಸುತ್ತಿದೆ. ಈ ಮಧ್ಯೆ ಬಯಲು ಭಾಗದಲ್ಲೂ ಕಾಡಾನೆಗಳ ದಾಳಿ ಆರಂಭವಾಗಿರುವುದು ರೈತರ ನಿದ್ದೆಗೆಡಿಸಿದೆ. ಕಾಡಾನೆ ದಾಳಿಗೆ ಬಲಿಯಾದ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡ ಬೇಕೆಂದು ಗ್ರಾಮಸ್ಥರು ಮತ್ತು ರೈತರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು : ಕಾಡಾನೆ ದಾಳಿ, ಓರ್ವ ಮಹಿಳೆ ಸಾವು
ಇನ್ನು ಜುಲೈ ತಿಂಗಳಿನಲ್ಲಿ ಕಾಡಾನೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿತ್ತು. ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ಅಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಮೂಡಿಗೆರೆಯ ಎಂ.ಐ.ಎಸ್.ಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸತ್ತಿಗನಹಳ್ಳಿ ಗ್ರಾಮದ ಪ್ರಭಾಕರ್ ಕೆಲಸ ಮುಗಿಸಿ ಬೈಕ್ನಲ್ಲಿ ಹಿಂದಿರುಗುವಾಗ ಈ ಘಟನೆ ನಡೆದಿತ್ತು. ಪ್ರಭಾಕರ್ ಕೂಡಲೇ ಬೈಕನ್ನು ಅಲ್ಲೇ ಬಿಟ್ಟು ಓಡಿ ಹೋಗಿ ಸಾವಿನಿಂದ ಪಾರಾಗಿದ್ದರು.
ಈ ಹಿಂದೆ ಕಾಡಾನೆ ಭೈರನ ದಾಳಿಗೆ ಮೂಡಿಗೆರೆ ತಾಲೂಕಲ್ಲಿ ಇಬ್ಬರು ಬಲಿ ಆಗಿದ್ದರು. ಇದರಿಂದ ಉದ್ರಕ್ತರಾಗಿದ್ದ ಜನರು ಅಂದು ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಂ ಪಿ ಕುಮಾರಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಇದರಿಂದ ಬೇಸತ್ತ ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಜನರು ಕ್ಷೇತ್ರದಲ್ಲಿ ನನ್ನನ್ನು ಓಡಾಡಲು ಬಿಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಪ್ರಾಣಕ್ಕೂ ಆಪತ್ತು ತಪ್ಪಿದ್ದಲ್ಲ ಎಂದು ಅಳಲು ತೋಡಿಕೊಂಡಿದ್ದರು.
ಈ ಘಟನೆ ಬಳಿಕ ಭೈರನನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಸೆರೆಹಿಡಿದಿದ್ದರು. ಆಗ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದ ಜನರಿಗೆ ಈಗ ಮತ್ತೋರ್ವ ರೈತನ ಸಾವು ಆತಂಕ ಮೂಡಿಸಿದೆ. ಕಾಡು ಪ್ರಾಣಿಗಳು ಮತ್ತು ಮಾನ ಸಂಘರ್ಷಕ್ಕೆ ಕೊನೆ ಇಲ್ಲವಾ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ: ಸಂಕಷ್ಟದಲ್ಲಿ ಅನ್ನದಾತರು