ಇಡೀ ದೇಶಕ್ಕೆ ಹೋಲಿಸಿದರೆ ಕರ್ನಾಟಕ ಜಲಸಂಪನ್ಮೂಲದಿಂದ ಸಂಪದ್ಭರಿತವಾಗಿದೆ. ಆದರೆ, ನೀರಾವರಿ ಯೋಜನೆಗಳು ಮಾತ್ರ ಸೋರುತ್ತ, ಸೊರಗುತ್ತಿವೆ.
ಚಿಕ್ಕಮಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಆದ್ರೆ, ಕೆಲ ಸಮಯದ ಹಿಂದೆ ಫ್ರಾರಂಭವಾದ ಏತ ನೀರಾವರಿ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ರಾಜಕಾರಣಿಗಳ ಬೇಜವಾಬ್ದಾರಿಯೇ ಇದಕ್ಕೆ ನೇರ ಕಾರಣ. ರೈತರಿಗೆ ಅನುಕೂಲವಾಗುವ ನೀರಾವರಿ ಯೋಜನೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಅಂತಾ ರೈತ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸ್ತಾರೆ.
ಒಂದಿಷ್ಟು ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಅನುಮೋದನೆ ಸಿಕ್ಕಿದೆ. ಆದ್ರೆ, ಕಳೆದ ವರ್ಷ ಕೋವಿಡ್ ಹಿನ್ನೆಲೆ, ಯಾವುದೇ ರೀತಿಯ ಅನುದಾನ ಬಂದಿಲ್ಲ. ಅನುಮೋದನೆ ಸಿಕ್ಕ ಯೋಜನೆಗಳು ನಡೆದರೆ ರೈತರೊಂದಿಗೆ ಸಾರ್ವಜನಿಕರಿಗೂ ಬಹಳ ಅನುಕೂಲ ಆಗಲಿದೆ. ಈಗ ಶೇಖರಣೆಯಾದ ನೀರು ರೈತರಿಗೆ ಬಳಸಿಕೊಳ್ಳಲು ಅನುಕೂಲವಾಗಿದೆಯೆಂಬುದು ಸಣ್ಣ ನೀರಾವರಿ ಇಲಾಖೆಯ ಎಇಇ ಅವರ ಅಭಿಪ್ರಾಯ.
ತುಂಗಭದ್ರಾ ಜಲಾಶಯದಿಂದ ಕೊಪ್ಪಳ ತಾಲೂಕಿನ ಒಂದಿಷ್ಟು ಪ್ರದೇಶ ಸೇರಿ ಗಂಗಾವತಿ, ಕಾರಟಗಿ ತಾಲೂಕಿನಲ್ಲಿ ನೀರಾವರಿಯಾಗುತ್ತಿದೆ. ಉಳಿದಂತೆ ಜಿಲ್ಲೆಯ ಅನೇಕ ಸಣ್ಣ ಸಣ್ಣ ಏತ ನೀರಾವರಿ ಹಾಗೂ ಮಧ್ಯಮ ನೀರಾವರಿ ಯೋಜನೆಗಳು ಹೆಸರಿಗೆ ಮಾತ್ರ ಎಂಬಂತಾಗಿವೆ. ಹಿರೇಹಳ್ಳ ಜಲಾಶಯದಿಂದ ಉದ್ದೇಶಿತ ಸುಮಾರು 20 ಸಾವಿರ ಎಕರೆ ಪ್ರದೇಶ ನೀರಾವರಿಯಾಗುವುದು ಇನ್ನೂ ಕನಸಾಗಿಯೇ ಉಳಿದಿದೆ.
ಸಿಂಗಟಾಲೂರು ಏತ ನೀರಾವರಿ ಯೋಜನೆ, ಕೃಷ್ಣಾ ಬಿ ಸ್ಕೀಂ ಯೋಜನೆಯ ಹಣೆಬರಹವೂ ಇದಕ್ಕೆ ಹೊರತಾಗಿಲ್ಲ. ಒಂದಿಷ್ಟು ಪ್ರದೇಶಗಳಿಗೆ ನೀರು ಸಿಕ್ಕಿದೆ ಹೊರತು ಕೆಲ ಪ್ರದೇಶಗಳಿಗೆ ಹನಿ ನೀರು ಹರಿದಿಲ್ಲ ಅಂತಿದ್ದಾರೆ ಸ್ಥಳೀಯ ರೈತರು.
ಅಸ್ತಿತ್ವದಲ್ಲಿರುವ ಕೆಲ ನೀರಾವರಿ ಯೋಜನೆಗಳ ನಿರ್ವಹಣೆಗೆ ಸರ್ಕಾರ ಪ್ರತಿವರ್ಷ ಹಣ ನೀಡುತ್ತಿದೆ. ಆದರೆ, ಅದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.