ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ರಾಜಕೀಯ ಪಕ್ಷಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ಮತ್ತೊಂದು ಕಡೆ ಮೂಲ ಸವಲತ್ತಿಗೆ ಒತ್ತಾಯಿಸಿ ಪ್ರತಿಭಟನೆಗೆಗಳು ಜೋರಾಗುತ್ತಿವೆ. ಇನ್ನೊಂದೆಡೆ ಸರ್ಕಾರ ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗದಿರುವ ಸ್ಥಳೀಯ ಆಡಳಿತಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಈಗಾಗಲೇ ಕೆಲವು ಗ್ರಾಮಗಳು ಚುನಾವಣೆ ಬಹಿಷ್ಕರಿಸಲು ಮುಂದಾಗಿವೆ.
ಮೂಲ ಸವಲತ್ತು ಕಲ್ಪಿಸದ್ದಕ್ಕಾಗಿ ಬಹಿಷ್ಕಾರದ ಬ್ಯಾನರ್: ಅಭಿವೃದ್ದಿ ಕಾರ್ಯಗಳಲ್ಲಿ ವಿಳಂಬ ಧೋರಣೆ ಸೇರಿದಂತೆ ಮೂಲ ಸೌಲಭ್ಯಕ್ಕಾಗಿ ಸರ್ಕಾರದ ವಿರುದ್ಧ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿ ಜಿಲ್ಲೆಯ ಕಳಸ ತಾಲೂಕಿನ ಶಂಕರಕೋಡಿ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಪ್ರಾರಂಭಿಸಲು ಮೀನಮೇಷ ಎಣಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುತ್ತಿದ್ದಾರೆ.
ಶಂಕರಕೂಡಿ ರಸ್ತೆಗೆ ಕಾಂಕ್ರೀಟ್ ಹಾಕಲು ಸರ್ಕಾರದಿಂದ 70 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಗುತ್ತಿಗೆದಾರರು ರಸ್ತೆಯನ್ನು ಅಗೆದು ಹಾಕಿ, ತಿಂಗಳು ಕಳೆದರೂ ಇತ್ತ ತಲೆ ಹಾಕಿಲ್ಲ. ರಸ್ತೆ ನಿರ್ಮಾಣಕ್ಕೆ ಹಳೆ ರಸ್ತೆ ಅಗೆದು ಹಾಕಿದ್ದರಿಂದ ಗ್ರಾಮಸ್ಥರು ಸಂಚರಿಸಲು ಪರದಾಡುತ್ತಿದ್ದಾರೆ. ಅಗೆದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪಡಬಾರದ ಸಂಕಷ್ಟ ಅನುಭವಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಎಷ್ಟೇ ಮನವಿ ಮಾಡಿದರೂ ಕೂಡ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಇದೇ ಕಾರಣದಿಂದ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ: ಊರಿನ ಪ್ರವೇಶದ್ವಾರದಲ್ಲಿ ಬ್ಯಾನರ್ ಅಳವಡಿಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ತನೂಡಿ ಗ್ರಾಮದ ಶಂಕರ ಕುಡಿಗೆಯ ಬಸರಿಕಟ್ಟೆಯಿಂದ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ನಡೆದಾಡಲೂ ಆಗದ ಸ್ಥಿತಿಗೆ ತಲುಪಿದ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು. ಮೂಡಿಗೆರೆ ಶಾಸಕರ ಹಾಗೂ ಜಿಲ್ಲಾ ಪಂಚಾಯತಿಗಳ ಅಸಹಕಾರದಿಂದ ಕಾಮಗಾರಿ ಆರಂಭವಾಗದೇ ರೋಗಿಗಳು, ಶಾಲಾ ಮಕ್ಕಳು ನಿತ್ಯವೂ ಬಸರಿಕಟ್ಟೆಗೆ ಬಂದು ಹೋಗಲು ಕಷ್ಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಕೊಪ್ಪ ತಾಲೂಕು ಮೇಗುಂದಾ ಹೋಬಳಿ ಅತ್ತಿಕುಡಿಗೆ ಗ್ರಾಮ ಪಂಚಾಯತಿಯ ಬೆತ್ತದಕೊಳಲು ಮತ್ತು ದೊಡ್ಡ ಬಿಳಾಲು ಗ್ರಾಮಸ್ಥರು ಕೂಡ ಚುನಾವಣೆ ಬಹಿಷ್ಕರಿಸಿ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ. "ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆಯು ಅನೇಕ ವರ್ಷಗಳಿಂದ ಹಾಳಾಗಿದ್ದು, ಅಂದಿನಿಂದ ಇಂದಿನವರೆಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ನಾವು ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೂ ಕೂಡ ಅವರ್ಯಾರೂ ಈ ಬಗ್ಗೆ ಗಮನ ಹರಿಸದ ಕಾರಣ ಚುನಾವಣೆ ಬಹಿಷ್ಕಾರ ನಡೆಸುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೆತ್ತದಕೊಳಲು ವ್ಯಾಪ್ತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎರಡು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸಿದ್ದು, ಮೊದಲ ಅವಧಿಯಲ್ಲಿ ಅತ್ತಿಕುಡಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ, ಎರಡನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಹೊಂದಿದ್ದಾರೆ. ಆದರೂ ತಮ್ಮ ಊರಿನ ಅಭಿವೃದ್ಧಿ ಬಗ್ಗೆ ಗಮನ ಹರಿಸದೆ ಇರುವುದು ದುರದೃಷ್ಟಕರವಾಗಿದೆ ಎಂದು ಜನರು ಆರೋಪಿಸಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ, ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ದಾಖಲೆಯೊಂದಿಗೆ ಉತ್ತರಿಸುವೆ: ಕಾಂಗ್ರೆಸ್ ಗೆ ಸುಧಾಕರ್ ಸವಾಲ್