ಚಿಕ್ಕಮಗಳೂರು : ಕೆಲ ವರ್ಷಗಳ ಹಿಂದೆ ಬೆಳಗಾದ್ರೆ ಸಾಕು ಎಲ್ಲರ ಮನೆಗಳಲ್ಲಿ ಗುಬ್ಬಚ್ಚಿಗಳ ಕಲರವ ಕೇಳುತ್ತಿತ್ತು. ಕ್ಷಣಕಾಲವೂ ಸುಮ್ಮನಿರದೆ ಚಿಂವ್ ಗುಡುತ್ತಾ, ಜಿಗಿಯುತ್ತಾ, ಪುಟಿದೇಳುತ್ತಿದ್ದ ಗುಬ್ಬಚ್ಚಿಗಳನ್ನು ನೋಡೋದೇ ಒಂದು ಚೆಂದ. ಆದರೆ, ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿಗಳಾಗಲಿ, ಗುಬ್ಬಚ್ಚಿ ಗೂಡುಗಳಾಗಲಿ ಕಾಣುವುದು ಅತಿ ವಿರಳ.
ಆದ್ರೆ, ಕಾಫಿನಾಡು ಚಿಕ್ಕಮಗಳೂರಿನ ಚಿಕ್ಕಕೊಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸೊಸೈಟಿ ಇದಕ್ಕೆ ಹೊರತಾಗಿದೆ. ಯಾಕಂದ್ರೆ, ಈ ಸೊಸೈಟಿ ಹತ್ತಾರು ಗುಬ್ಬಚ್ಚಿಗಳಿಗೆ ಆಶ್ರಯ ನೀಡಿದ್ದು, ಪ್ರತಿ ದಿನ ಅವುಗಳನ್ನು ಹಾರೈಸುತ್ತಾ ಅವುಗಳ ಸಂತತಿಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ.
ಸುಮಾರು ಹತ್ತಕ್ಕೂ ಹೆಚ್ಚು ಕೃತಕ ಗೂಡುಗಳನ್ನ ನಿರ್ಮಿಸಿ, 150ಕ್ಕೂ ಅಧಿಕ ಗುಬ್ಬಚ್ಚಿಯನ್ನ ಸಾಕುತ್ತ ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಸೊಸೈಟಿ ನೌಕರ ಚಂದ್ರು. ಕಳೆದ 30 ವರ್ಷಗಳಿಂದ ಈ ಸೊಸೈಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರು, ಸುಮಾರು 20 ವರ್ಷಗಳಿಂದ ಗುಬ್ಬಚ್ಚಿಗಳ ಸಂತತಿ ಉಳಿವಿಗೆ ಶ್ರಮಿಸುತ್ತಿದ್ದಾರೆ.
ನಿತ್ಯ ಅನ್ನ, ಬೇಕರಿಯ ಸಿಹಿ ತಿನಿಸುಗಳು ಹಾಗೂ ಖಾರದ ಪದಾರ್ಥವನ್ನು ತಟ್ಟೆಯಲ್ಲಿ ಹಾಕಿದ ಕೂಡಲೇ ಗುಬ್ಬಚ್ಚಿಗಳು ಬಂದು ತಿನ್ನೋದನ್ನ ನೋಡಿ ಸಂತಸ ಪಡುತ್ತಿದ್ದಾರೆ. ಸೊಸೈಟಿಯಲ್ಲೇ ಕೃತಕ ಗೂಡುಗಳನ್ನು ಚಂದ್ರು ನಿರ್ಮಿಸಿದ್ದು, ಆರಂಭದಲ್ಲಿ ನಾಲ್ಕೈದು ಇದ್ದ ಗುಬ್ಬಚ್ಚಿಗಳ ಸಂಖ್ಯೆ ಇಂದು 150 ದಾಟಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಗೂಡುಗಳನ್ನ ನಿರ್ಮಿಸಿ, ಗುಬ್ಬಚ್ಚಿ ಸಂತತಿ ಉಳಿಸೋದ್ರ ಜೊತೆ ಅವುಗಳ ಸಂಖ್ಯೆಯನ್ನ ಮತ್ತಷ್ಟು ಹೆಚ್ಚಿಸುವ ಆಸೆ ಚಂದ್ರು ಅವರದ್ದಾಗಿದೆ. ಇವರ ಈ ಕಾರ್ಯಕ್ಕೆ ಮೈಸೂರಿನ ಖಾಸಗಿ ಸಂಸ್ಥೆಯಿಂದ ಪ್ರಶಸ್ತಿಯೂ ಲಭಿಸಿದೆ.
ಪ್ರಾಣಿ-ಪಕ್ಷಿಗಳ ಸಂತತಿ ನಾಶವಾಗುತ್ತಿದೆ ಎಂದು ಹೇಳುವ ಬದಲು, ಅವುಗಳ ಉಳಿವಿಗೆ ಬೇಕಾದ ಕ್ರಮ ಕೈಗೊಂಡರೆ ಯಾವ ಸಂತತಿಯೂ ಕಣ್ಮರೆಯಾಗುವುದಿಲ್ಲ ಅನ್ನೋದಕ್ಕೆ ಇದು ಒಳ್ಳೇ ಉದಾಹರಣೆ. ಸೊಸೈಟಿಯಲ್ಲಿ ಚಿಂವ್‍ಚಿಂವ್ ಕಲರವದೊಂದಿಗೆ, ಜಿಗಿದಾಡ್ತಾ, ಹಾರಾಡ್ತಾ ಜನರ ಮನಸ್ಸಿಗೆ ಮುದ ನೀಡ್ತಿರೋ ಅಳಿವಿನಂಚಿನ ಗುಬ್ಬಚ್ಚಿ ಸಂತತಿ ಹೀಗೆ ಮುಂದುವರೆಯಲಿ..