ಚಿಕ್ಕಮಗಳೂರು: ಮುಂಬೈ ನಿಂದ ಲಾರಿ ಮೂಲಕ ಜಿಲ್ಲೆಯ ತರೀಕೆರೆಗೆ ಆಗಮಿಸಿದ್ದ ಚಾಲಕ ಹಾಗೂ ನಿರ್ವಾಹಕನ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ.
ಈಗಾಗಲೇ ಲಾರಿ ಚಾಲಕ, ಹಾಗೂ ನಿರ್ವಾಹಕನ ಗಂಟಲು ದ್ರವ, ಹಾಗೂ ರಕ್ತ ಪರೀಕ್ಷೆಯನ್ನು ಮಾಡಲಾಗಿದ್ದು, ನಾವು ಆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಬಂದ ನಂತರ ಅದರ ಬಗ್ಗೆ ಯೋಚನೆ ಮಾಡಿ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು. ಈಗಾಗಲೇ ತರೀಕೆರೆ ಜನರು ಆತಂಕದಲ್ಲಿದ್ದು, ಮನೆಯಿಂದ ಜನರು ಹೊರ ಬರುವುದಕ್ಕೆ ಹೆದರುವಂತಾಗಿದೆ.
ಇಷ್ಟು ದಿನಗಳ ಕಾಲ ಹಸಿರು ವಲಯದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆ, ಈ ಇಬ್ಬರು ವ್ಯಕ್ತಿಗಳಿಂದ ಕೊರೊನ ವೈರಸ್ ಗೆ ತುತ್ತಾಗುವ ಆತಂಕಕ್ಕೆ ಒಳಗಾಗಿದೆ. ಈಗಾಗಲೇ ವ್ಯಕ್ತಿಗಳು ಓಡಾಡಿದ ಜಾಗ, ಹಾಗೂ ರಸ್ತೆಯನ್ನು ಸಂಪೂರ್ಣವಾಗಿ ತರೀಕೆರೆ ಪೊಲೀಸರು ಬಂದ್ ಮಾಡಿದ್ದು, ಸಾರ್ವಜನಿಕರು ಈ ಭಾಗದಲ್ಲಿ ಸಂಚಾರ ಮಾಡದಂತೆ ಎಚ್ಚರಿಕೆ ವಹಿಸಿದ್ದಾರೆ.