ಚಿಕ್ಕಮಗಳೂರು: ಮಹಾರಾಷ್ಟ್ರದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿ ಬಂದ ಕರ್ನಾಟಕದ 14 ಕಾರ್ಮಿಕರಿಗೆ ರಾಜ್ಯದ ಗಡಿಯಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಹೀಗಾಗಿ ಕಾರ್ಮಿಕರು ವಿಜಯಪುರದ ಭೀಮಾನದಿ ಸೇತುವೆ ಕೆಳಗೆ ಉಳಿದುಕೊಂಡಿದ್ದಾರೆ.
ಚಿಕ್ಕಮಗಳೂರು 10, ಶಿವಮೊಗ್ಗ 2, ರಾಮನಗರ ಮತ್ತು ಉತ್ತರ ಕನ್ನಡದ ತಲಾ ಒಬ್ಬ ಕಾರ್ಮಿಕರು ಊಟ ನೀರಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಲಾಕ್ಡೌನ್ ಆರಂಭವಾದ ಸಂದರ್ಭದಲ್ಲಿ 180 ಕಿ.ಮೀ ಕಾಲ್ನಡಿಗೆ ಮೂಲಕವೇ ಬರುತ್ತಿದ್ದ ಈ ಕಾರ್ಮಿಕರನ್ನು ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 14 ಜನರನ್ನೂ 34 ದಿನ ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಈ ಅವಧಿ ಮುಗಿದ ಕಾರಣ ಕರ್ನಾಟಕಕ್ಕೆ ಹೋಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರು ರಾಜ್ಯಕ್ಕೆ ಮರಳಿದ್ದರು. ಈ ವೇಳೆ, ಇಂಡಿ ತಾಲೂಕಿನ ಗಡಿಯಲ್ಲಿ ರಾಜ್ಯಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಅತಂತ್ರರಾಗಿರುವ ಕಾರ್ಮಿಕರು ಮೇ 3ರಿಂದ ಈವರೆಗೂ ಭೀಮಾನದಿಯ ಸೇತುವೆ ಕೆಳಗೆ ವಾಸ್ತವ್ಯ ಹೂಡಿದ್ದಾರೆ. ಊಟಕ್ಕಾಗಿ ಪರದಾಡುತ್ತಿರುವ ಕಾರ್ಮಿಕರು, ಸ್ವಗ್ರಾಮಗಳಿಗೆ ತಲುಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.