ಚಿಕ್ಕಮಗಳೂರು: 2002 ರಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಗುಂಡೇಟು ತಿಂದು ವೀರ ಮರಣವನ್ನಪ್ಪಿದ್ದ ಯೋಧನ ಕುಟುಂಬವೊಂದು ಇಂದಿಗೂ ಸರ್ಕಾರದ ಸೌಲಭ್ಯ ಸಿಗದೇ ಜೀವನ ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ತರೀಕೆರೆ ತಾಲೂಕು ಅಜ್ಜಂಪುರದ ವೀರಯೋಧ ಪುಟ್ಟಸ್ವಾಮಿ 2002 ಸೆ. 29 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬುದ್ವಾರ್ದಲ್ಲಿ ಪಾಕಿಸ್ತಾನ ಮತ್ತು ಭಾರತದ ಸೈನಿಕರ ನಡುವೆ ನಡೆಯುತ್ತಿದ್ದ ಗುಂಡಿನ ಚಕಮಕಿಯಲ್ಲಿ ಹುತಾತ್ಮನಾಗಿದ್ದ.
ಯೋಧ ಪುಟ್ಟಸ್ವಾಮಿ ಸಾವಿನ ಸುದ್ದಿ ತಿಳಿದ ಕುಟುಂಬ ನೋವಿನಲ್ಲಿ ಮುಳುಗಿತ್ತು. ಇದೇ ಕೊರಗಿನಲ್ಲಿ ಪುಟ್ಟಸ್ವಾಮಿ ತಂದೆ-ತಾಯಿ ಕೂಡ ಕೆಲವೇ ವರ್ಷಗಳಲ್ಲಿ ಮೃತಪಟ್ಟರು.
ಪುಟ್ಟಸ್ವಾಮಿ ಹೆಸರನ್ನು ತರೀಕೆರೆಯ ಅಜ್ಜಂಪುರ ಬಸ್ ನಿಲ್ದಾಣಕ್ಕೆ ಇಟ್ಟು ಗೌರವ ಸಲ್ಲಿಸಲಾಯಿತು. ಆದರೆ ಯೋಧನ ಕುಟುಂಬಕ್ಕೆ ಕೇವಲ ಸನ್ಮಾನ ಹಾಗೂ ಗೌರವ ಸಿಕ್ಕಿದ್ದು ಬಿಟ್ಟರೆ ಯಾವುದೇ ರೀತಿಯ ಸಹಾಯ ದೊರೆಯಲಿಲ್ಲ.
ಪುಟ್ಟಸ್ವಾಮಿ ಸಾವನ್ನಪ್ಪಿದ ಸಂದರ್ಭದಲ್ಲಿ ಆಗಿನ ರಾಜ್ಸಯ ರ್ಕಾರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿ ಸಮಾಧಾನ ಪಡಿಸಿತ್ತು. ಆದರೆ ಕುಟುಂಬದ ಯಾವುದೇ ಸದಸ್ಯರಿಗೂ ಇಂದಿಗೂ ಯಾವುದೇ ಉದ್ಯೋಗ ಕೊಡದೇ ಮಾತು ತಪ್ಪಿದೆ ಎಂಬ ಆರೋಪ ಕೇಳಿಬಂದಿದೆ.
ಪುಟ್ಟಸ್ವಾಮಿಗೆ ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಈಗಾಗಲೇ ಓರ್ವ ಅಣ್ಣನೂ ಮೃತಪಟ್ಟಿದ್ದಾನೆ. ಈಗ ಇಡೀ ಕುಟುಂಬ ಕಷ್ಟದಲ್ಲಿದೆ. ಪುಟ್ಟಸ್ವಾಮಿ ಸಹೋದರ ರಾಮಪ್ರಸಾದ್ ಕೆಲಸಕ್ಕಾಗಿ ಬೆಂಗಳೂರು - ದೆಹಲಿ ಸುತ್ತುತ್ತಿದ್ದಾರೆ. ಕುಟುಂಬಕ್ಕೆ ಎಂದಾದರೂ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಯಲ್ಲಿದೆ.
ದೇಶ ಕಾಯುವ ವೀರ ಯೋಧರು ಹುತಾತ್ಮರಾದಾಗ ಸಾಲು ಸಾಲು ಭರವಸೆಗಳನ್ನು ರಾಜಕೀಯ ನಾಯಕರು ನೀಡುತ್ತಾರೆ. ಆದ್ರೆ ಅವು ನಿಜಕ್ಕೂ ಈಡೇರುತ್ತವಾ, ಹುತಾತ್ಮ ಯೋಧರ ಕುಟುಂಬಗಳಿಗೆ ತಲುಪುತ್ತವಾ ಎಂಬುದನ್ನು ಸರ್ಕಾರ ಮತ್ತು ಸೇನಾ ಇಲಾಖೆ ನೋಡಿಕೊಳ್ಳಬೇಕಿದೆ.