ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು ತಾಲೂಕಿನ ದೇವನೂರು ಗ್ರಾಮದ ಬೃಹತ್ ಕೆರೆ 12 ವರ್ಷಗಳ ಬಳಿಕ ಕೋಡಿ ಬಿದ್ದಿದ್ದು ದೇವನೂರು ಹಾಗೂ ಸುತ್ತ ಮುತ್ತಲಿನ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಜ್ಜಂಪುರ ಹಾಗೂ ಕಡೂರು ಭಾಗದಲ್ಲೇ ಯಥೇಚ್ಛವಾಗಿ ಮಳೆ ಸುರಿದಿದ್ದು ಕೆರೆ - ಕಟ್ಟೆ- ಹಳ್ಳ-ಕೊಳ್ಳಗಳು ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಡೂರು ತಾಲೂಕಿನ ದೇವನೂರು ಗ್ರಾಮದ ದೇವನೂರು ಕೆರೆ ಸುಮಾರು 350 ಎಕರೆಗೂ ಅಧಿಕ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ.
ಈ ಕೆರೆ ತುಂಬಿದರೆ ನಾಲ್ಕೈದು ವರ್ಷಗಳ ಕಾಲ ಈ ಭಾಗದ ಜನಸಾಮಾನ್ಯರು ಹಾಗೂ ದನಕರುಗಳಿಗೆ ಕುಡಿಯೋ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಕೆರೆ ಕೋಡಿ ಬೀಳದೇ ಸುಮಾರು 12 ವರ್ಷಗಳೇ ಕಳೆದಿತ್ತು. ಕೆರೆಯ ತುಂಬಾ ಗಿಡಘಂಟೆಗಳು ಬೆಳೆದಿದ್ದವು. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ತುಂಬಿ ಕೋಡಿ ಬಿದ್ದಿದೆ.
ಆದರೆ, ಕೋಡಿ ಬಿದ್ದ ನೀರು ಹೊಲ ಗದ್ದೆಗಳಿಗೆ ನುಗ್ಗುತ್ತಿರುವ ಪರಿಣಾಮ ತೋಟಗಳಲ್ಲಿ ಎರಡರಿಂದ ಮೂರು ಅಡಿ ನೀರು ನಿಂತಿದ್ದು ಭತ್ತ, ಹತ್ತಿ, ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿವೆ. ಇನ್ನು ಅಡಕೆ ತೋಟದಲ್ಲೂ ನೀರು ನುಗ್ಗಿದ್ದು, ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಬಯಲುಸೀಮೆ ಭಾಗದಲ್ಲಿ ಸುರಿಯುತ್ತಿರೋ ಮಳೆಯಿಂದ ರೈತರಿಗೆ ಒಂದೆಡೆ ಖುಷಿ ತಂದಿದ್ದು, ಮತ್ತೊಂದೆಡೆ ಆತಂಕವನ್ನೂ ಸೃಷ್ಟಿ ಮಾಡಿದೆ. ಇನ್ನು ಸಣ್ಣ ಬೆಳೆಗಾರರು ತಾವು ಬೆಳೆದಿರುವ ಬೆಳೆ ಹಾನಿಯಾಗಿದ್ದು, ಸರ್ಕಾರ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಪಿನಾಕಿನಿ ನದಿಯ ಅಬ್ಬರಕ್ಕೆ 50 ವಿಲ್ಲಾಗಳು ಮುಳುಗಡೆ.. ನಿವಾಸಿಗಳ ಪರದಾಟ