ಚಿಕ್ಕಮಗಳೂರು: ಅನಧಿಕೃತವಾಗಿ ರೈತನ ಜಮೀನಿಗೆ ನುಗ್ಗಿ ಸುಮಾರು 200ಕ್ಕೂ ಅಧಿಕ ಕಾಫಿ ಹಾಗೂ ಅಡಿಕೆ ಗಿಡಗಳನ್ನು ಕಡಿದ ಅರಣ್ಯ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಒತ್ತಾಯಿಸಿದ್ದಾರೆ.
ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯ ದೇವಗೋಡು ಗ್ರಾಮದ ಸರ್ವೆ ನಂಬರ್, 197 ರಲ್ಲಿ ಈರಯ್ಯ ಎಂಬ ರೈತ ಬಗರ್‌ಹುಕುಂ ಸಾಗುವಳಿಯಂತೆ ಅಡಿಕೆ ಮತ್ತು ಕಾಫಿ ಸಾಗುವಳಿ ಮಾಡುತ್ತಿದ್ದು, ಸಾಗುವಳಿಯನ್ನು ಸಕ್ರಮಗೊಳಿಸಿ ಖಾಯಂ ಮಂಜೂರು ಮಾಡುವಂತೆ ಕೋರಿ 18.09.2010 ರಲ್ಲಿಯೇ ನಮೂನೆ-53 ರಲ್ಲಿ ಕೊಪ್ಪ ತಾಲೂಕು ತಹಶೀಲ್ದಾರ್‌ರವರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನಲೆ ಮುಂದಿನ ದಿನಗಳಲ್ಲಿ ಈ ಭೂಮಿ ನನಗೆ ಶಾಶ್ವತವಾಗಿ ಸಿಗಬಹುದು ಎಂದು ಕೃಷಿಯನ್ನು ಮುಂದುವರೆಸಿದ್ದರು.
ಈರಯ್ಯನ ಅರ್ಜಿ ಬಗರ್ ಹುಕುಂ ಸಕ್ರಮ ಸಮಿತಿಯಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ, ಮೇಗುಂದಾ ಹೋಬಳಿ ಫಾರೆಸ್ಟರ್ ಸುಬ್ರಹ್ಮಣ್ಯ, ಜಯಪುರ ಬೀಟ್ ಅರಣ್ಯ ರಕ್ಷಕ ಕೃಷ್ಣಮೂರ್ತಿ ಮತ್ತು ನರಸಿಂಹರಾಜಪುರ ತಾಲ್ಲೂಕು ಹಲಸೂರು ಬೀಟ್ ಅರಣ್ಯ ರಕ್ಷಕ ಶಿವಶಂಕರ ಈ ರೈತನಿಗೆ ಯಾವುದೇ ರೀತಿಯ ನೋಟಿಸ್ ನೀಡದೆ, ಆತನ ಜಮೀನಿಗೆ ಪ್ರವೇಶ ಮಾಡಿ ಸುಮಾರು 200 ಅಡಿಕೆ ಮರಗಳು ಮತ್ತು ನಾಲ್ಕು ವರ್ಷದ ನೂರಾರು ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಕೂಡಲೇ ಈ ರೈತನಿಗೆ ನಷ್ಟವನ್ನು ಭರಿಸಬೇಕು ಹಾಗೂ ಈ ರೀತಿ ಕೃತ್ಯ ಎಸಗಿದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಅರಣ್ಯ ಸಿಬ್ಬಂದಿ ವರ್ತನೆ ಕುರಿತು ಕೊಪ್ಪ ತಾಲೂಕಿನ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಪ್ರಶ್ನಿಸಲು ತೆರಳಿದ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮತ್ತು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ತಾಕತ್ ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ.