ಚಿಕ್ಕಮಗಳೂರು: ವೈರಲ್ ಜ್ವರ ತಂಪಾದ ಹವಾಮಾನವಿರುವ ಮಳೆಗಾಲದಲ್ಲಿ ಬರುವುದು ಸಾಮಾನ್ಯ ವಿಚಾರ. ಮಳೆಗಾಲವೆಂದರೆ ಅದು ಜ್ವರ, ಶೀತ, ಕೆಮ್ಮು ಮತ್ತು ನೆಗಡಿಯೊಂದಿಗೆ ಬದುಕುವಂತಹ ಸಮಯ. ಆದರೆ, ವೈರಲ್ ಜ್ವರವನ್ನು ವೈದ್ಯರು ಕೋವಿಡ್ನಿಂದ ಯಾವ ರೀತಿ ಬೇರ್ಪಡಿಸಿ ಚಿಕಿತ್ಸೆ ನೀಡುತ್ತಾರೆ ಎಂಬುದು ಒಂದು ಚಿಂತೆಯಾಗಿದೆ.
ಈ ಕುರಿತು ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಮಾತನಾಡಿ, ಕೋವಿಡ್-19 ಮತ್ತು ವೈರಲ್ ಜ್ವರದ ರೋಗ ಲಕ್ಷಣಗಳು ಒಂದೇ ಆಗಿದ್ದರೂ ಗಂಟಲು ದ್ರವ ತೆಗೆದು ಪರೀಕ್ಷೆ ನಡೆಸಿದ ನಂತರವೇ ಅದರ ವ್ಯತ್ಯಾಸ ಗೊತ್ತಾಗಲಿದೆ. ಕೋವಿಡ್ ಜಗತ್ತಿಗೆ ಹರಡಿದೆ. ಶೀತ, ಜ್ವರ, ಕಾಣಿಸಿಕೊಂಡರೆ ಐಎಲ್ಐ ಎಂದೂ ಕರೆಯುತ್ತೇವೆ. ಕೋವಿಡ್ ಇಲ್ಲದಿದ್ದರೇ ಚಿಕಿತ್ಸೆ ನೀಡುವ ವಿಧಾನ ಬೇರೆಯಾಗಿರುತ್ತದೆ. ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡರೆ ಆರ್ಟಿಪಿಸಿಆರ್ ಪರೀಕ್ಷೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ಶ್ವಾಸಕೋಶದ ತೊಂದರೆ ಪ್ರಕರಣಗಳು, ಟೈಫಾಯ್ಡ್, ಅತಿಸಾರ ಬೇದಿ, ಬೇರೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗ ಮಾಸ್ಕ್ ಧರಿಸುತ್ತಿರುವ, ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿರುವ ಕಾರಣ ಅವು ಇಳಿಮುಖವಾಗಿವೆ ಎಂದು ಹೇಳಿದರು.
ಕೊರೊನಾ ಬಂದ ನಂತರ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಯಾವುದೇ ಜ್ವರ ಬಂದರೂ ಕೋವಿಡ್ ಎನ್ನುವ ಭಾವನೆ ಬಂದಿದೆ. ಇದರಿಂದ ಜನರು ಆಸ್ವತ್ರೆಗಳತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಕಾರಣ ಖಾಸಗಿ ಆಸ್ಪತ್ರೆಗಳು ಇದನ್ನೇ ವ್ಯಾಪಾರ ಮಾಡಿಕೊಂಡಿವೆ. ಒಟ್ಟಿನಲ್ಲಿ ಈ ವರ್ಷ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಕುಂಠಿತಗೊಂಡಿರುವುದು ಸತ್ಯ.