ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಇಂದಿನಿಂದ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದ್ದರೂ ಕೊಟ್ಟಿಗೆಹಾರ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದರು. ಆದ್ರೆ ವಾಹನ ಸವಾರರು ಚೆಕ್ ಪೋಸ್ಟ್ ಪೊಲೀಸರಿಗೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿ ತೋರಿಸಿದ ನಂತರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕಳೆದ 15 ದಿನಗಳ ಹಿಂದೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲವೆಂದು ಎಸ್ಪಿ ವರದಿ ನೀಡಿದ್ದರು. ಎಸ್ಪಿ ಆದೇಶದ ಬಳಿಕ ಡಿಸಿ ತಮ್ಮ ಆದೇಶ ಹಿಂಪಡೆದಿದ್ದರು. ಇದೀಗ 2ನೇ ಬಾರಿ ಡಿಸಿ ಬಗಾದಿ ಗೌತಮ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಒದೊಂದೇ ವಾಹನಗಳನ್ನು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬಿಡಲಾಗುತ್ತಿದೆ. ಇಂದು ಬೆಳಗ್ಗೆ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಪ್ರತಿ ಸಿಕ್ಕ ನಂತರ ವಾಹನಗಳನ್ನು ಬಿಡಲಾಗುತ್ತಿದೆ. ಕೊಟ್ಟಿಗೆ ಹಾರದಿಂದ ಮಂಗಳೂರು, ಧರ್ಮಸ್ಥಳ ಕಡೆ ವಾಹನ ಸಂಚಾರ ಆರಂಭವಾಗಿದೆ.