ಚಿಕ್ಕಮಗಳೂರು: ಕೊರೊನಾ ವೈರಸ್ನಿಂದ ಮೃತಪಟ್ಟ ರೋಗಿಯ ಚಿಕಿತ್ಸೆಗೆ 9 ಲಕ್ಷಕ್ಕೂ ಅಧಿಕ ಬಿಲ್ ಮಾಡಿ, ದುಬಾರಿ ಬಿಲ್ಗೆ ರಿಯಾಯಿತಿ ಕೇಳಿದ್ದಕ್ಕೆ ಕೇವಲ 1 ರೂ. ರಿಯಾಯಿತಿ ನೀಡಿರೋ ಅಮಾನುಷ ಘಟನೆ ವಿರುದ್ಧ ಜಿಲ್ಲಾಧಿಕಾರಿ ಗರಂ ಆಗಿದ್ದಾರೆ.
ನಗರದ ಆಶ್ರಯ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಘಟನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ನ ಮಾಜಿ ಜಿಲ್ಲಾಧ್ಯಕ್ಷರ ಒಡೆತನದಲ್ಲಿರುವ ಈ ಖಾಸಗಿ ಆಸ್ಪತ್ರೆ ಬಿಲ್ನಿಂದ ಕಂಗೆಟ್ಟಿರುವ ಕುಟುಂಬಸ್ಥರು ದುಬಾರಿ ಬಿಲ್ ನೀಡಿರುವ ಆಶ್ರಯ ಆಸ್ಪತ್ರೆ ವಿರುದ್ಧ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ದೂರು ನೀಡಿದ್ದರು.
ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಅವರು ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಚಿಕಿತ್ಸೆಗೆ ಆಸ್ಪತ್ರೆಯು 9 ಲಕ್ಷ 25 ಸಾವಿರದ 601 ರೂ. ಬಿಲ್ ಮಾಡಿರುವುದರಿಂದ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಯು ಕೇವಲ 1 ರೂಪಾಯಿ ರಿಯಾಯಿತಿ ನೀಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೊರೊನಾಗೆ ವೃದ್ಧ ಬಲಿ: 9.25 ಲಕ್ಷ ಬಿಲ್ ಕೊಟ್ಟು ಒಂದೇ ರೂಪಾಯಿ ಡಿಸ್ಕೌಂಟ್ ನೀಡಿದ ಆಸ್ಪತ್ರೆ!
ಈ ಕುರಿತು ಮೃತನ ಕುಟುಂಬಸ್ಥರು ಜಿಲ್ಲಾಧಿಕಾರಿ ಬಳಿ ತೆರಳಿ ಈ ಕುರಿತು ತನಿಖೆ ನಡೆಸಿ ನಮಗೆ ನ್ಯಾಯ ಓದಗಿಸುವಂತೆ ಮನವಿ ಮಾಡಿದ್ದಾರೆ. ಈ ಘಟನೆ ಕುರತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಈ ಕುರಿತು ಮೃತನ ಕುಟುಂಬದ ಸದಸ್ಯರು ನನ್ನ ಬಳಿ ಲಿಖಿತ ದೂರು ನೀಡಿದ್ದಾರೆ. ಡಿಹೆಚ್ಓಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.