ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿ ಮುಂಗಾರಿನ ವೇಳೆ ಯಾವ ಭಾಗದಲ್ಲಾದರೂ ಪ್ರವಾಹ ಸಂಭವಿಸಿದಲ್ಲಿ ಮುಂಜಾಗೃತಾ ಕ್ರಮವಾಗಿ ಮೂಲಭೂತ ಸೌಲಭ್ಯಗಳು ಇರುವಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.
ಬೇಸಿಗೆ ಹಾಗೂ ಮಳೆಗಾಲದ ಅವಧಿಯಲ್ಲಿ ಉದ್ಭವಿಸಬಹುದಾದ ವಿಪತ್ತು ಮತ್ತು ಹಾನಿಗಳ ಸಮಗ್ರ ಸಮೀಕ್ಷೆ ಹಾಗೂ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದು, ಕಳೆದ ಬಾರಿಯಂತೆ ಮುಂಗಾರಿನಲ್ಲಿ ಜಿಲ್ಲೆಯ ಯಾವ ಭಾಗದಲ್ಲಾದರೂ ಪ್ರವಾಹದ ನಿರೀಕ್ಷೆಯಿದ್ದು, ಮುಂಜಾಗೃತವಾಗಿ ಎಲ್ಲಾ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಟಾಸ್ಕ್ ಪೋರ್ಸ್ ಸಭೆ ನಡೆಸಿ ಆಯಾ ಕಾರ್ಯವ್ಯಾಪ್ತಿಯ ಭಾಗಗಳಲ್ಲಿ ನಿರಾಶ್ರಿತರಿಗೆ ಉಳಿಯಲು ಸ್ಥಳ, ನೀರು, ಆಹಾರ, ವಿದ್ಯುತ್, ಸೇರಿದಂತೆ ಮೂಲಭೂತ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಅಲ್ಲದೇ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸುವ ವ್ಯವಸ್ಥೆ ರೂಪಿಸಲಾಗುತ್ತದೆ. ಹಿಂದಿನ ಪ್ರವಾಹದ ವೇಳೆ ನಿರಾಶ್ರಿತರಿಗೆ ಉಳಿಯಲು ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಕೊರೊನಾ ಸೋಂಕು ಇರುವ ಕಾರಣ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಇರಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 182 ವಸತಿ ನಿಲಯಗಳಿದ್ದು ಸುಸಜ್ಜಿತವಾಗಿರುವ ಬಗ್ಗೆ ಮಾಹಿತಿ ಪಡೆದು ದುರಸ್ಥಿ ಹಾಗೂ ಸಮಸ್ಯೆಗಳಿದ್ದಲ್ಲಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಮಲೆನಾಡು ಭಾಗ ಮುಖ್ಯವಾಗಿ ಮೂಡಿಗೆರೆ ಮತ್ತು ಕಳಸ ಭಾಗದಲ್ಲಿ ಮಳೆಗಾಲದಲ್ಲಿ ವಿದ್ಯುತ್ ಹಾಗೂ ರಸ್ತೆ ಸಮಸ್ಯೆಗಳು ಹೆಚ್ಚಾಗಲಿದ್ದು ಈ ಬಗ್ಗೆ ಮೆಸ್ಕಾಂ ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳು ಕ್ರಮವಹಿಸಿ ಮುಂಜಾಗೃತೆಯಾಗಿ ವಿದ್ಯುತ್ ತಂತಿಗಳು ಹಾಗೂ ಟ್ರಾನ್ಸ್ಫಾರ್ಮರ್ಗಳ ಪರಿಶೀಲನೆ ನಡೆಸಬೇಕು.
ಕಚ್ಚಾ ರಸ್ತೆಗಳಿದ್ದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರಿಗೆ ಓಡಾಟಕ್ಕೆ ಅನುವಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ಪ್ರತಿ ತಾಲೂಕುಗಳಲ್ಲಿ ಇಂತಹ ಸಂದರ್ಭ ಕಾಮಗಾರಿಗೆ ಅನುಕೂಲವಾಗುವಂತೆ ಲಭ್ಯವಿರುವ ಜೆಸಿಬಿಗಳ ಕೊರತೆ ಇದ್ದಲ್ಲಿ ಪಕ್ಕದ ಜಿಲ್ಲೆಗಳಿಂದ ತರಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಈ ಸಭೆಯಲ್ಲಿ ಜಿಲ್ಲಾಧಿಕಾರಿ ಆದೇಶ ನೀಡಿದರು.