ಚಿಕ್ಕಮಗಳೂರು: ಶ್ರೀರಾಮಸೇನೆಯ ವತಿಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು ಚಿಕ್ಕಮಗಳೂರು ನಗರದಲ್ಲಿಂದು ಬೃಹತ್ ಶೋಭಾಯಾತ್ರೆ ಆರಂಭವಾಗಿದೆ. 2,000ಕ್ಕೂ ಅಧಿಕ ಮಾಲಾಧಾರಿಗಳು ಪಾಲ್ಗೊಂಡಿದ್ದಾರೆ. ಎಂ.ಜಿ.ರಸ್ತೆ ಕೇಸರಿಮಯವಾಗಿ ಕಂಗೊಳಿಸುತ್ತಿದೆ.
ನಗರದಾದ್ಯಂತ 900ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜಿಲ್ಲಾದ್ಯಂತ ಸಾವಿರಾರು ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಶೋಭಾಯಾತ್ರೆಯ ಬಳಿಕ ದತ್ತಪೀಠಕ್ಕೆ ಮಾಲಾಧಾರಿಗಳು ತೆರಳಲಿದ್ದು, ದತ್ತಪೀಠದಲ್ಲೂ ಪೊಲೀಸರ ಹೈ ಅಲರ್ಟ್ ಹಾಕಲಾಗಿದೆ. ದತ್ತಪೀಠ ಸೇರಿದಂತೆ ಜಿಲ್ಲಾದ್ಯಂತ ಸಿಸಿಟಿವಿ, ಡ್ರೋನ್ ಕ್ಯಾಮರಾ ಕಣ್ಗಾವಲಿ ಕಂಡುಬಂದಿದೆ.
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಗಣೇಶನ ಕುರಿತು ಪಂಡಿತಾರಾಧ್ಯ ಶ್ರೀಗಳ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದರು. ಪಂಡಿತಾರಾಧ್ಯರ ಬಗ್ಗೆ ಅಪಾರವಾದ ಗೌರವವಿದೆ. ನಾಟಕ, ಉತ್ಸವದ ಮೂಲಕ ಸಾಮಾಜಿಕವಾಗಿ ಬಹಳ ದೊಡ್ಡ ಕ್ರಾಂತಿ ಮಾಡಿದ ಮಠ ಅದು. ಅವರು ಸಣ್ಣ ಹೇಳಿಕೆ ನೀಡಿ ವಿವಾದಸೃಷ್ಟಿ ಮಾಡಿರುವುದು ಸರಿಯಲ್ಲ. ನಿಮಗೆ ಇದು ಶೋಭೆ ತರುವುದಿಲ್ಲ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಶುಭಕಾರ್ಯಗಳ ಸಂದರ್ಭದಲ್ಲಿ ಮೊದಲ ಪೂಜೆ ಗಣೇಶನಿಗೆ ಸಲ್ಲುತ್ತದೆ. ಗಣೇಶನ ಅಪ್ಪ ಶಿವನನ್ನು ಪೂಜೆ ಮಾಡುವ ನಿಮಗೆ ಗಣೇಶ ಬೇಡ್ವಾ? ನಮ್ಮ ಲಾಜಿಕ್ ಏನು? ಎಂದು ಕೇಳಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಶ್ರೀರಾಮ ಸೇನೆ ವತಿಯಿಂದ ದತ್ತಮಾಲಾ ಅಭಿಯಾನ; ಪ್ರವಾಸಿಗರಿಗೆ ನಿರ್ಬಂಧ
ವಚನಗಳನ್ನು ಹೇಳಬೇಕು, ಉಳಿಸಬೇಕು ಎಂಬ ಹೇಳಿಕೆಗೆ ನಮ್ಮ ವಿರೋಧವಿಲ್ಲ. ಗಣೇಶನ ಪೂಜೆಗೆ ಏಕೆ ವಿರೋಧ ಮಾಡುತ್ತೀರಿ? ಪೂಜೆ ಮಾಡುವುದು ತಪ್ಪು, ಮೂಢನಂಬಿಕೆ ಎಂದು ಏಕೆ ಹೇಳುತ್ತೀರಿ? ಸಾವಿರಾರು ವರ್ಷಗಳ ನಂಬಿಕೆಯನ್ನು ವಿರೋಧಿಸುವುದು ಸಂವಿಧಾನ ವಿರೋಧಿಯಾಗುತ್ತದೆ. ಸಾರ್ವಜನಿಕವಾಗಿ ಒಂದು ನಂಬಿಕೆಯನ್ನು ಘಾಸಿಗೊಳಿಸುವುದು ನಿಮಗೆ ಶೋಭೆ ತರುವುದಿಲ್ಲ. ನಿಮ್ಮ ಹೇಳಿಕೆಯನ್ನು ಹಿಂಪಡೆಯಿರಿ ಎಂದರು.
ದತ್ತ ಮಾಲಾಧಾರಿಗಳಿಂದ ಭಿಕ್ಷಾಟನೆ: ಶನಿವಾರ ನಗರದ ವಿಜಯಪುರದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಮಾಲಾಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ್ದಾರೆ. ಮಾಲಾಧಾರಿಗಳು ರಾಜ್ಯಾದ್ಯಂತ ಭಿಕ್ಷಾಟನೆ ನಡೆಸಿದ್ದು, ಇದರಿಂದ ಬಂದ ಪಡಿ ಅಂದರೆ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಎಲ್ಲ ವಸ್ತುಗಳನ್ನು ಬಡವರಿಗೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಶ್ರೀರಾಮಸೇನೆ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನಕ್ಕೆ ಚಾಲನೆ- ವಿಡಿಯೋ