ಚಿಕ್ಕಮಗಳೂರು : ರಾಜ್ಯದ ಮೂಲೆ-ಮೂಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದತ್ತ ಪಾದುಕೆ ದರ್ಶನ ಪಡೆದು ಪುನೀತರಾದರು. ಕಳೆದೊಂದು ವಾರದಿಂದ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಭಾನುವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನಕ್ಕೆ ನಿನ್ನೆ ತೆರೆ ಬಿದ್ದಿದೆ. ದತ್ತಪೀಠಕ್ಕೆ ಆಗಮಿಸಿದ್ದ ಮಾಲಾಧಾರಿಗಳು ಬೃಹತ್ ದತ್ತಮಾಲಾ ಶೋಭಾಯಾತ್ರೆ ನಡೆಸಿ, ಬಳಿಕ ದತ್ತ ಪಾದುಕೆ ದರ್ಶನ ಪಡೆದರು. ದತ್ತಭಕ್ತರಿಗೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಮಹೇಶ್ ಕಟ್ಟಿಮನೆ ಸಾಥ್ ನೀಡಿದರು. ಬಳಿಕ ಗಣಪತಿ, ದತ್ತಾತ್ರೇಯ ಹೋಮ ನಡೆಸಲಾಯಿತು.
ಇದನ್ನೂ ಓದಿ: ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ಬೃಹತ್ ದತ್ತಮಾಲಾ ಶೋಭಾಯಾತ್ರೆ ಆರಂಭ
ಈ ವರ್ಷ ಸಹ ಹಿಂದೂ ಅರ್ಚಕರನ್ನು ಶೀಘ್ರ ನೇಮಿಸಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂಬ ಆಗ್ರಹ ಕೇಳಿಬಂತು. ದತ್ತಪೀಠದ ಚೆಂಡು ಸರ್ಕಾರದ ಅಂಗಳದಲ್ಲಿದೆ. ಹಿಂದುತ್ವದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಕೂಡಲೇ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕು. ಶಾಸಕ ಸಿ.ಟಿ. ರವಿ ಅವರು ತಕ್ಷಣವೇ ಅರ್ಚಕರನ್ನು ನೇಮಿಸಿ ಪೂಜೆ ಪ್ರಾರಂಭ ಮಾಡಬೇಕು ಎಂದು ದತ್ತ ಮಾಲಾಧಾರಿಗಳು ಆಗ್ರಹಿಸಿದರು.
ಇದನ್ನೂ ಓದಿ: ದತ್ತಮಾಲಾ ಅಭಿಯಾನ ಶೋಭಾಯಾತ್ರೆ: ಚಿಕ್ಕಮಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್