ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ತುಂಬಾ ಅದ್ಧೂರಿಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಜಯಂತಿ ಆಚರಣೆ ಮಾಡುತ್ತಿದ್ದು, ಭಾನುವಾರದಿಂದ 26ರವರೆಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮದ ಉದ್ದಕ್ಕೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಹೌದು, ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಈಗಾಗಲೇ ಅಧಿಕೃತ ಚಾಲನೆ ದೊರೆತಿದ್ದು, ಈ ಭಾರಿ ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಮಾಲಾಧಾರಣೆ ಮಾಡಲು ಮುಂದಾಗಿದ್ದಾರೆ. ಜಿಲ್ಲಾದ್ಯಂತ 28 ಚೆಕ್ ಪೋಸ್ಟ್, ಸಿಸಿ ಟಿವಿ ಅಳವಡಿಗೆ ಮಾಡಲಾಗಿದೆ. ಪ್ರತಿ ಚೆಕ್ ಪೋಸ್ಟ್ಗೂ ವಿಶೇಷ ದಂಡಾಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾದ್ಯಂತ ಭದ್ರತೆಗಾಗಿ 5000 ಪೊಲೀಸರು, 7ASP, 30 DYSP, 30 ಇನ್ಸ್ಪೆಕ್ಟರ್, ನೂರಾರು ಹೋಂಗಾರ್ಡ್, 20 KSRP ತುಕಡಿ ಸೇರಿದಂತೆ ಹಲವು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 300ಕ್ಕೂ ಅಧಿಕ ಸಿಸಿ ಕ್ಯಾಮೆರಾ ಹಾಗೂ 50ಕ್ಕೂ ಹೆಚ್ಚು ಬಾಡಿ ಕ್ಯಾಮೆರಾ, 2 ಸಿಸಿ ಟಿವಿ ಕ್ಯಾಮೆರಾ ವೀಕ್ಷಣಾ ತಂಡಗಳ ರಚನೆ ಮಾಡಲಾಗಿದೆ.
ಇನ್ನು ಪೊಲೀಸರು ನಗರದ ರಾಮನ ಹಳ್ಳಿಯಿಂದ ನಗರದ ಎಂಜಿ ರಸ್ತೆ ಮೂಲಕ 5000ಕ್ಕೂ ಅಧಿಕ ಪೊಲೀಸರು ರೂಟ್ ಮಾರ್ಚ್ ಮಾಡಿದ್ದಾರೆ. ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ನಗರದ ಹೊರ ವಲಯದಲ್ಲೂ ಕೂಡ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲೆಯಾದ್ಯಂತ ನಾಳೆಯಿಂದ ಮೂರು ದಿನಗಳ ಕಾಲ ಮದ್ಯಪಾನ ನಿಷೇಧ ಜಾರಿ ಮಾಡಿದ್ದು, ಜೊತೆಗೆ ದತ್ತಪೀಠ ಮಾರ್ಗದಲ್ಲಿ ಬಾರಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ರೆಸಾರ್ಟ್, ಹೋಂ ಸ್ಟೇಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಅವಕಾಶ ಇದ್ದು, ದತ್ತ ಜಯಂತಿ ದಿನಾಂಕ ಘೋಷಣೆ ಆದ ಬಳಿಕ ಬುಕ್ಕಿಂಗ್ ಮಾಡಿದ ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಇದೇ 24ರ ಭಾನುವಾರದಂದು ನಗರದಲ್ಲಿ ಸಾವಿರಾರು ಮಹಿಳೆಯರು ಬೃಹತ್ ಸಂಕೀರ್ತನ ಯಾತ್ರೆ ನಡೆಸಿ ದತ್ತ ಪೀಠದಲ್ಲಿ ಹೋಮ ಹವನ ನಡೆಸುವ ಮೂಲಕ ಅನುಸೂಯ ಜಯಂತಿ ಆಚರಿಸಲಿದ್ದಾರೆ. 25ರಂದು ಚಿಕ್ಕಮಗಳೂರು ನಗರದಲ್ಲಿ ದತ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 20 ಸಾವಿರಕ್ಕೂ ಅಧಿಕ ಜನ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. 26 ರಂದು ರಾಜ್ಯದ ಮೂಲೆ ಮೂಲೆಗಳಿಂದ ಬರುವ 25,000ಕ್ಕೂ ಅಧಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.
ಒಟ್ಟಾರೆಯಾಗಿ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ನಾಳೆಯಿಂದ ಡಿ.27 ರವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಡಿ. 24, 25 ಮತ್ತು 26 ರಂದು ದತ್ತ ಜಯಂತಿ ನಡೆದ ಬಳಿಕ ಸಂಪೂರ್ಣವಾಗಿ ಈ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
ಇದನ್ನೂ ಓದಿ: ಬಾಬಾಬುಡನ್ ಗಿರಿಯಲ್ಲಿ ದತ್ತ ಜಯಂತಿ: ಪ್ರಸಿದ್ಧ ಪ್ರವಾಸಿತಾಣಗಳ ವೀಕ್ಷಣೆಗೆ 6 ದಿನ ನಿರ್ಬಂಧ