ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಚಿಕ್ಕಮಗಳೂರಿನ ಹಿಂದೂಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸುತ್ತಿರುವ ದತ್ತಮಾಲ ಅಭಿಯಾನ ಮತ್ತು ದತ್ತ ಜಯಂತಿ ಉತ್ಸವ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಇಂದು ನೂರಾರು ಮಹಿಳೆಯರು ಅನಸೂಯ ಜಯಂತಿ ಮತ್ತು ಸಂಕೀರ್ತನಾ ಯಾತ್ರೆ ನಡೆಸಿ ದತ್ತ ಪೀಠದಲ್ಲಿ ಪಾದುಕೆ ದರ್ಶನ ಪಡೆದರು.
ಇದಕ್ಕೂ ಮುನ್ನ, ಮಹಿಳೆಯರು ಭೋಳು ರಾಮೇಶ್ವರ ದೇವಾಲಯದಿಂದ ಐಜಿ ರಸ್ತೆಯ ಮೂಲಕ ಸಾಗಿ ಸಂಕೀರ್ತನಾ ಯಾತ್ರೆಯನ್ನು ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಮುಕ್ತಾಯಗೊಳಿಸಿದರು. ಯಾತ್ರೆ ಮುಗಿದ ನಂತರ ವಾಹನಗಳ ಮೂಲಕ ದತ್ತ ಪೀಠಕ್ಕೆ ತೆರಳಿ, ಗುಹೆಯಲ್ಲಿರುವ ದತ್ತಾತ್ರೇಯನ ಪಾದುಕೆ ದರ್ಶನ ಪಡೆದು ನಂತರ ಅನಸೂಯ ಗದ್ದುಗೆಗೆ ಪೂಜೆ ಸಲ್ಲಿಸಿದರು. ಇದಾದ ನಂತರ ಜಿಲ್ಲಾಡಳಿತ ನಿರ್ಮಿಸಿರುವ ನೀಲಿ ಶೀಟಿನ ಮಂಟಪದಲ್ಲಿ ಆರ್ಚಕರ ನೇತೃತ್ವದಲ್ಲಿ ದುರ್ಗಾ ಹೋಮ, ಗಣಪತಿ ಹೋಮ, ಹನುಮ ಹೋಮ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು.
ರಾಜ್ಯದ ವಿವಿಧ ಮೂಲೆಮೂಲೆಗಳಿಂದ ಆಗಮಿಸಿದ್ದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ ನೀಡುವ ಪ್ರಸಾದ ಸ್ವೀಕರಿಸಿ ತಮ್ಮ ತಮ್ಮ ಸ್ಥಳಗಳಿಗೆ ನಿರ್ಗಮಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರವಾಸಿ ತಾಣಗಳಿಗೆ ನಿರ್ಬಂಧ: ಡಿಸೆಂಬರ್ 25ರಂದು ನಗರದಲ್ಲಿ ದತ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 20 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ. 26ರಂದು 25,000ಕ್ಕೂ ಅಧಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಈ ಸಲುವಾಗಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ದತ್ತ ಜಯಂತಿ ಹಿನ್ನೆಲೆ: ಚಿಕ್ಕಮಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, 5000 ಪೊಲೀಸರಿಂದ ರೂಟ್ ಮಾರ್ಚ್