ಚಿಕ್ಕಮಗಳೂರು: ರಾಜ್ಯ ಸಂಪುಟ ವಿಸ್ತರಣೆ ಮಾಡುವುದು, ಬಿಡುವುದು ಮುಖ್ಯಮಂತ್ರಿಗಳಿಗಿರುವ ಪರಮಾಧಿಕಾರ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು, ಯಾರನ್ನು ಬೇಕಾದರೂ ಮಾಡಬಹುದು. ಅದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು. ಪಕ್ಷದ ವರಿಷ್ಠರು ಸರ್ಕಾರಕ್ಕೆ ಸಲಹೆ ನೀಡುತ್ತಾರೆ. ಆದರೆ, ನಿರ್ಧಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದು ಸಿ ಟಿ ರವಿ ಹೇಳಿದ್ದಾರೆ.
ಯಾವುದೇ ಊಹೆಗೆ ನಾನು ಪ್ರತಿಕ್ರಿಯಿಸಬಾರದು. ಅದೇ ರೀತಿ ಊಹೆಯ ಪ್ರಶ್ನೆಯನ್ನೂ ನೀವು ಕೇಳಬಾರದು. ನನ್ನ ಖಾತೆ ಬದಲಾವಣೆ ನಿಮ್ಮ ಊಹೆ. ನಾನು ಕಾರ್ಯಕರ್ತ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾನು ಪೋಸ್ಟರ್ ಹೊಡೆದಿರೋನು, ಪಕ್ಷದ ಫ್ಲ್ಯಾಗ್ ಕಟ್ಟಿರೋನು. ಕಾರ್ಯಕರ್ತ ಎಂಬುದನ್ನು ನಾನು ಬದುಕಿರೋವರೆಗೂ ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದನ್ನು ನಾನು ತೀರ್ಮಾನ ಮಾಡಬೇಕು. ಕೆಲಸ ಮಾಡಲು ಯಾವ ಪೋಸ್ಟ್ ಆದರೇನು ಎಂದ್ದಾರೆ.
ಮಂತ್ರಿಯ ವ್ಯಾಪ್ತಿ ಹಾಗೂ ಸಾಮಾರ್ಥ್ಯ ನನಗೆ ತಿಳಿದಿದೆ. ನನ್ನ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅನುಕೂಲ ಆಗುವ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತಿದ್ದೇನೆ. ಈವರೆಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಯಾರು ಮಂತ್ರಿಯಾಗಿದ್ದಾರೆ, ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಒಂದು ಮೌಲ್ಯ ಮಾಪನ ಮಾಡಿ. ವ್ಯಕ್ತಿತ್ವ ಪ್ರಬಲವಾಗಿದ್ದರೆ ಯಾವ ಖಾತೆಗೆ ಆದರೂ ಪ್ರಾಬಲ್ಯ ತರಬಹುದು. ವ್ಯಕ್ತಿತ್ವ ದುರ್ಬಲ ಆಗಿದ್ದರೆ ಯಾವ ಖಾತೆ ನೀಡಿದರೂ ದುರ್ಬಲವೇ ಎಂದು ಸಿ ಟಿ ರವಿ ಹೇಳಿದ್ದಾರೆ.
ಇದೇ ವೇಳೆ ರಾಮನಗರದಲ್ಲಿ ನಡೆಯುತ್ತಿರುವ ಕಪಾಲಿ ಬೆಟ್ಟದ ಹೋರಾಟದ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ ಕ್ರಮಬದ್ಧವಾಗಿದ್ದರೆ ಏನೂ ಸಮಸ್ಯೆಯಿಲ್ಲ. ಕಾನೂನು ವಿರುದ್ಧವಾಗಿ ಮಂಜೂರು ಆಗಿದ್ದರೆ ಕಷ್ಟವಾಗುತ್ತದೆ. ಈಗಾಗಲೇ ತನಿಖೆ ನಡೆಸಲಾಗಿದೆ. ಕಂದಾಯ ಸಚಿವರು ಅದನ್ನು ಗಮನಿಸುತ್ತಿದ್ದಾರೆ. ಅವರೇ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರತಿಭಟನೆ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಯಾರ ಪರ-ವಿರುದ್ಧ ಎಂಬ ಪ್ರಶ್ನೆ ಇಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆಯಬೇಕು. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದಿದ್ದಾರೆ.