ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಬಂದರೆ ಜನ ಸೇರೋದು. ಮೋದಿ ಬರುತ್ತಾರೆ ಎಂದರೇ ಲಕ್ಷ, ಲಕ್ಷ ಜನ ಸೇರುತ್ತಾರೆ, ಸೇರೋದಕ್ಕೂ, ಸೇರ್ಸೋದಕ್ಕೂ ವ್ಯತ್ಯಾಸವಿದೆ ಎಂದು ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ ಟಿ ರವಿ ವ್ಯಂಗ್ಯವಾಡಿದರು. ಚಿಕ್ಕಮಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೇರ್ಸೋದು ಹಲವು ಕಾರಣಕ್ಕೆ, ಸೇರೋದು ಪ್ರೀತಿಗೆ ಮಾತ್ರ. ಪ್ರಜೆಗಳ ಬಲ ಮೋದಿಯವರ ಜೊತೆ ಇದೆ ಎಂದರು.
ಕಾಂಗ್ರೆಸ್ನವರು ಪ್ರಜೆಗಳ ಧ್ವನಿಯನ್ನು ಕೇಳಬೇಕು, ಆದರೆ ಅವರ ಧ್ವನಿಯನ್ನು ಪ್ರಜೆಗಳಿಗೆ ಕೇಳಿಸುತ್ತಿದ್ದಾರೆ. ಅವರ ಅಧಿಕಾರಾವದಿಯಲ್ಲಿ ಪಿಎಫ್ಐ ಕಾರ್ಯಕರ್ತರನ್ನ ಬಿಟ್ಟಿದ್ದು, ಅಮಾಯಕರ ಹತ್ಯೆಯಾಗಿದ್ದು, ರಿಡ್ಯೂ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದದ್ದು, ಜನ ಅವರ ಸಾಧನೆಯನ್ನು ಪಿಸುಗುಡುತ್ತಿಲ್ಲ, ಕೂಗಿ ಕೂಗಿ ಹೇಳುತ್ತಿದ್ದಾರೆ. ಪ್ರಜಾಧ್ವನಿ ಅಂದರೆ ಪ್ರಜೆಗಳ ಧ್ವನಿಯನ್ನ ಕೇಳಬೇಕು, ಇವರು ಮೈಕ್ ಹಿಡಿದು ಕೂಗೋದಲ್ಲ. ನಮ್ಮ ಪ್ರಶ್ನೆಗೆ ನೇರವಾಗಿ ಉತ್ತರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗರಿಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಮಾಲೀಕರು, ಅವರ ಧ್ವನಿ ಚುನಾವಣೆಯಲ್ಲಿ ಕೇಳುತ್ತದೆ ಎಂದು ಹೇಳಿದರು.
ಕಾಂಗ್ರೆಸಿಗರು ಮೋದಿ ಹೆಸರೇಳಿದರೆ ಮುಳುಗುವವರು ತೇಲಬಹುದು : ರಾಮನ ಹೆಸರು ಬರೆದರೆ ಮುಳುಗುವ ಕಲ್ಲು ತೇಲುತ್ತಿತ್ತು. ಕಾಂಗ್ರೆಸಿಗರು ಮೋದಿ ಹೆಸರೇಳಿದರೆ ಮುಳುಗುವವರು ತೇಲಬಹುದು. ಕಾಂಗ್ರೆಸ್ಸಿಗರು ಮೋದಿ ಹೆಸರನ್ನು ಬಂಡವಾಳ ಮಾಡಿಕೊಳ್ಳಲಿ, ಬೇಡ ಅಂದವರು ಯಾರು. ಕಾಂಗ್ರೆಸಿಗರಿಗೆ ಗತಿ ಇಲ್ಲ, ಇಟಲಿ ರಾಣಿಯನ್ನು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಸಿ ಟಿ ರವಿ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ, ಈ ಮಣ್ಣಿನ ಮಗ ಸಾಮಾನ್ಯವಾದ ಬಡ ಕುಟುಂಬದಿಂದ ಬಂದವರು. 20 ವರ್ಷದಿಂದ ಒಂದೇ ಒಂದು ಹಗರಣ ಕೂಡ ಇಲ್ಲದ ನಾಯಕತ್ವ. ಪ್ರತಿ ಸಂದರ್ಭದಲ್ಲಿ ದಲಿತರು, ಬಡವರ ಅಭಿವೃದ್ಧಿ ಹಾಗೂ ಅವರ ಗೌರವದ ಬಗ್ಗೆ ಚಿಂತಿಸುತ್ತಾರೆ. ಅಂಬೇಡ್ಕರ್ ಅವರ ಲೆಗಸಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದವರು. ಅಂಥವರನ್ನು ನಾವು ಬಂಡವಾಳ ಮಾಡಿಕೊಳ್ಳದೆ ಕಾಂಗ್ರೆಸ್ಸಿಗರು ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸಿಗರು ಮೋದಿ ಹೆಸರೇಳಿ ಡೆಪಾಸಿಟ್ ಹೋಗೋದನ್ನ ತಪ್ಪಿಸಿಕೊಳ್ಳಬಹುದು : ಮೋದಿ ಅಂತ ನಾಯಕರಿಲ್ಲ ಎಂದು ಅವರು ಬಂಡವಾಳ ಮಾಡಿಕೊಳ್ಳಲಿ ಬೇಡ ಅಂದವರು ಯಾರು. ನಾಳೆಯಿಂದ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಒಳ್ಳೆಯ ಕೆಲಸವನ್ನು ಹೇಳಿಕೊಂಡು ಓಡಾಡಲಿ. ಕಾಂಗ್ರೆಸಿಗರು ಮೋದಿ ಹೆಸರೇಳಿ ಡೆಪಾಸಿಟ್ ಹೋಗೋದನ್ನು ತಪ್ಪಿಸಿಕೊಳ್ಳಬಹುದು, ತಪ್ಪಿಸಿಕೊಳ್ಳಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸೌಂಡ್ ಜಾಸ್ತಿ, ಗ್ರೌಂಡ್ನಲ್ಲಿ ಬಿಜೆಪಿ ಇದೆ. ಕಾಂಗ್ರೆಸ್ ಗುಜರಾತಿನಲ್ಲೂ ಭಾರೀ ಸೌಂಡ್ ಮಾಡಿತ್ತು, ಕೊನೆಗೆ ಏನಾಯ್ತು ಎಂದು ಸಿ ಟಿ ರವಿ ಪ್ರಶ್ನಿಸಿದರು.
ಕಾಂಗ್ರೆಸ್ನದ್ದು ಸೌಂಡು, ಬಿಜೆಪಿಯದ್ದು ಗ್ರೌಂಡ್ : ಬಿಜೆಪಿ ಬೂತ್ ವಿಜಯ ಅಭಿಯಾನ ಮಾಡುತ್ತಿದೆ, ಬೂತ್ ಗೆದ್ದರೆ, ಬಿಜೆಪಿ ಗೆದ್ದಂತೆ. ನಮ್ಮದು ಗ್ರಾಸ್ ರೂಟ್ ವರ್ಕ್, ಕಾಂಗ್ರೆಸ್ ನದ್ದು ದೊಡ್ಡ ಮೈಕ್ ಹಾಕಿಕೊಂಡು ನಮ್ಮನ್ನ ಬೈಯುವ ಕೆಲಸ. ಕಾಂಗ್ರೆಸ್ನದ್ದು ಸೌಂಡು, ಬಿಜೆಪಿಯದ್ದು ಗ್ರೌಂಡ್. ಫೀಲ್ಡ್ ನಲ್ಲಿ ಗೆಲ್ಲುವುದು ಗ್ರೌಂಡ್, ಸೌಂಡ್ ಅಲ್ಲ. ಸೌಂಡ್ ನ ಬಲಕಿವಿಯಲ್ಲಿ ಕೇಳಿ ಎಡ ಕಿವಿಯಲ್ಲಿ ಬಿಡುತ್ತಾರೆ ಎಂದು ಕಾಂಗ್ರೆಸ್ಸಿನ ಪ್ರಜಾ ಧ್ವನಿಯಾತ್ರೆ ಕುರಿತು ಸಿ ಟಿ ರವಿ ಲೇವಡಿ ಮಾಡಿದರು.
ಇದನ್ನೂ ಓದಿ:ಯತ್ನಾಳ್ಗೆ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದ್ದು ಹೌದು..!: ನಳಿನ್ ಕುಮಾರ್ ಕಟೀಲ್