ಚಿಕ್ಕಮಗಳೂರು : ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದದ ಸ್ವರೂಪ ಪಡೆದುಕೊಳ್ಳಬಾರದು. ರಾಯಣ್ಣ ಪ್ರತಿಮೆ ನಿರ್ಮಾಣವಾಗಲೇಬೇಕು. ಸಂಗೊಳ್ಳಿ ರಾಯಣ್ಣನ ಹೆಸರು ಇಡುವುದು ನಮಗೆ ಹೆಮ್ಮೆಯ ವಿಷಯ. ಏನೇ ಅಡೆತಡೆ ಇದ್ದರೂ ಅದನ್ನು ಬಗೆಹರಿಸುವುದಾಗಿ ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಹೇಳಿದರು.
ನಗರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದದ ಕುರಿತು ಮಾತನಾಡಿದ ಅವರು, ಇದು ಸಂಘರ್ಷದ ಸ್ವರೂಪ ಪಡೆಯುತ್ತಿರುವುದು ದುರಾದೃಷ್ಟ. ಸಂಘರ್ಷದ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ಹಿಂದೆ ರಾಜಕೀಯದ ದುರ್ಬಳಕೆ ನಡೆದಿದೆ. ಆ ಜನ ಈ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಂಚಿನ ಸಾಧ್ಯತೆ ಇದೆ. ಸಂಚು ರೂಪಿಸುವ ಹಂತದಲ್ಲಿದ್ದರೆ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದರು.
ಸಿದ್ದರಾಮಯ್ಯನವರ ಟ್ವೀಟ್ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದವರು. ಕಾಗಿನೆಲೆ ಸ್ವಾಮೀಜಿ ಭೇಟಿ ಬಳಿಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡುವುದಾಗಿ ಸಿಎಂ ಹೇಳಿದ್ದರು. ಗೊಂದಲ ಸೃಷ್ಟಿ ಮಾಡೋದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಚು ಅನ್ನೋದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಹಿನ್ನೆಲೆ ಒಂದು ಕಾಲದಲ್ಲಿ ಸಿಎಂ ಆಗಿದ್ದವರು ಯೋಚನೆ ಮಾಡಬೇಕು. ನಾಳೆ ಮತ್ತೊಬ್ಬರು ಸಿಎಂ ಆಗಬಹುದು. ಅವರ ಆದೇಶವೇ ಅಂತಿಮ. ಇಲ್ಲಿ ರಾಜ್ಯದ ಜನರ ನೆಮ್ಮದಿ ಹಾಳು ಮಾಡುವ ಸಂಚು ನಡೆದಿದೆ. ಆ ಸಂಚಿಗೆ ಸಿದ್ದರಾಮಯ್ಯನವರು ಬಲಿಯಾಗಬಾರದು ಎಂದರು.