ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 70 ನೇ ಹುಟ್ಟುಹಬ್ಬದ ಹಿನ್ನೆಲೆ ನಗರದ ಎಂ ಜಿ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಭೇಟಿ ನೀಡಿ, ಮೋದಿ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಹಾಗೂ ಪೂಜೆ ನೆರವೇರಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಿ.ಟಿ ರವಿ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಕಟಿ ಬದ್ಧವಾಗಿದ್ದು, ದಾಸ್ಯದ ನೆನಪು ಅಳಿಸೋದಕ್ಕೆ ಕಾಂಗ್ರೆಸ್ ಹೈದ್ರಾಬಾದ್ ಕರ್ನಾಟಕ ಎಂದೇ ಹೇಳುತ್ತಿದ್ದರು. ಕಾಂಗ್ರೆಸ್ಸಿಗರು ಗುಲಾಮಗಿರಿಯ ಮಾನಸಿಕತೆಯಿಂದ ಹೊರ ಬಂದಿರಲಿಲ್ಲ. ಆದರೆ ಬಿಜೆಪಿ ಅದಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ. ಹಿಂದೂ ದಿವಸ್‍ಗೆ ವಿರೋಧ ಮಾಡುತ್ತಾರೆ. ಇದು ನಾಟಕ ಅಲ್ವಾ?. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ವೈಭವೀಕರಿಸಿ ಆಚರಿಸುತ್ತದೆ. ಕಾಂಗ್ರೆಸ್ಗೆ ಕನ್ನಡದ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ. ಕನ್ನಡದ ಉಳಿವಿಗಾಗಿ ಮಾಡುವ ಎಲ್ಲಾ ಪ್ರಯತ್ನಕ್ಕೂ ನಮ್ಮ ಬೆಂಬಲವಿದೆ. ಹೋರಾಟ ಕನ್ನಡದ ಉಳಿವಿಗೋ, ಹಿಂದಿ ದ್ವೇಷಕ್ಕೋ ಎಂದು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿ.ಟಿ.ರವಿ ಪ್ರಶ್ನೆ ಮಾಡಿದರು.
ಹಿಂದಿ ದ್ವೇಷಕ್ಕೆ ಅನ್ನೋದಾದರೇ ನಮ್ಮ ಬೆಂಬಲವಿಲ್ಲ. ಹಿಂದಿ ಕಾರಣಕ್ಕೆ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಬಂದ್ ಆಗಿಲ್ಲ. ಆದರೆ ಸಾವಿರ ಉದಾಹರಣೆ ಕೊಡುತ್ತೇನೆ, ಇಂಗ್ಲಿಷ್ ಕಾರಣಕ್ಕೆ ಸಾವಿರಾರು ಶಾಲೆ ಬಂದ್ ಆಗಿವೆ. ಇಂಗ್ಲಿಷ್ ಓಕೆ, ಹಿಂದಿ ದ್ವೇಷಿ ನಿಮ್ಮ ಉದ್ದೇಶನಾ?, ಹಿಂದಿಯನ್ನು ವಿರೋಧಿಸುವವರು ಸಂವಿಧಾನ, ಅಂಬೇಡ್ಕರ್ರನ್ನ ವಿರೋಧ ಮಾಡುತ್ತಾರೆ. ಅವತ್ತು ಒಪ್ಪಿಕೊಂಡ ಕಾಂಗ್ರೆಸ್, ಇವತ್ತು ಬಣ್ಣ ಬದಲಿಸಿದೆ ಅಂದರೇ ಅದು ಗೋಸುಂಬೆತನ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಚಿವ ಸಿ.ಟಿ.ರವಿ ಕಿಡಿ ಕಾರಿದರು.
ನಂತರ ದತ್ತಪೀಠದ ವಿಚಾರವಾಗಿ ಮಾತನಾಡಿ, ಜಸ್ಟಿಸ್ ನಾಗಮೋಹನ್ ದಾಸ್ ವಿರುದ್ಧ ವಾಗ್ದಾಳಿ ನಡೆಸಿದರು. ದತ್ತ ಪೀಠಕ್ಕೆ ಅನ್ಯಾಯ ಮಾಡಿದ ಜಸ್ಟಿಸ್ ನಾಗಮೋಹನ್ ದಾಸ್ ಅವರು, ದತ್ತ ಪೀಠಕ್ಕೆ ಅನ್ಯಾಯ ಮಾಡಿದ್ದಾರೆ. ಇವತ್ತು ದಾಖಲೆ ಹೇಳುತ್ತೆ, ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ. ನ್ಯಾಯಾಧೀಶ ಎಂಬ ಪದಕ್ಕೆ ಕಳಂಕ ಬರುವ ರೀತಿ ವರದಿ ಕೊಟ್ಟವರು ಅವರು. ಪೂರ್ವಾಗ್ರಹ ಪೀಡಿತರಾಗಿ ವರದಿ ತಯಾರಿಸಿಕೊಂಡು ಸಮೀಕ್ಷೆಗೆ ಬಂದವರು. ಸೋಶಿಯಲ್ ಮೀಡಿಯಾದಲ್ಲಿ ಬಂತೆಂದು ಊರಿಗೆ ಬೆಂಕಿಹಾಕೋದನ್ನ ಸಮಿತಿ ಒಪ್ಪಿಕೊಳ್ಳುತ್ತಾ. ಸಂವಿಧಾನ ಹಾಗೂ ನೆಲದ ಕಾನೂನಿನ ಬಗ್ಗೆ ಗೌರವ ಇಲ್ಲದವರು ಬೆಂಕಿ ಹಾಕುತ್ತಾರೆ. ಉಳಿದವರು ಹಿಂದೂ ಧರ್ಮವನ್ನ ಅಪಮಾನಿಸಿದರೆ ಜಸ್ಟಿಸ್ ನಾಗಮೋಹನ್ ದಾಸ್ ಅವರಿಗೆ ಏನು ಅನ್ಸಲ್ಲ. ನಾನು ಯಾವ ಧರ್ಮವನ್ನ ಅವಮಾನಿಸೋದನ್ನು ಒಪ್ಪುವುದಿಲ್ಲ. ಇದು ಸತ್ಯಶೋಧನ ಸಮಿತಿಯಲ್ಲ, ಸುಳ್ಳನ್ನ ಸತ್ಯ ಎಂದು ಬಿಂಬಿಸಲು ಹೊರಟ ಷಡ್ಯಂತ್ರದ ಸಮಿತಿ. ಅವರು ಸ್ಕ್ರಿಪ್ಟ್ ರೆಡಿ ಮಾಡಿಯೇ ಅಲ್ಲಿಗೆ ಹೋದವರು, ಅವರು ಜಸ್ಟಿಸ್ ಅಲ್ಲ, ಇಂಜಸ್ಟೀಸ್ ನಾಗಮೋಹನ್ ದಾಸ್. ಕಮ್ಯುನಿಸ್ಟ್ ಅಜೆಂಡಾವನ್ನ ಒಡಕಿನ ಬೀಜವನ್ನ ಬಿತ್ತೋದಕ್ಕೆ ಕೆಲವರನ್ನ ಮುಂಚೂಣೆಯಲ್ಲಿ ಇಟ್ಟುಕೊಂಡಿರುತ್ತಾರೆ. ಆ ಮುಂಚೂಣಿಯಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಕೂಡ ಒಬ್ಬರು ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಹೇಳಿದರು.