ಚಿಕ್ಕಮಗಳೂರು: ನಗರದ ಬೋಳರಾಮೇಶ್ವರ ದೇವಸ್ಥಾನದ ಬಳಿ ಇರುವ ಸರ್ಕಾರಿ ನೌಕರರ ಭವನದಲ್ಲಿ ನೂತನ ಕ್ಯಾಂಟೀನ್ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಉದ್ಘಾಟನೆ ಮಾಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಸಚಿವರು, ನಗರದಲ್ಲಿನ ಸರ್ಕಾರಿ ನೌಕರರ ಜಾಗದಲ್ಲಿ ಕಲ್ಯಾಣ ಮಂಟಪ ಹಾಗೂ ಸಮುಚ್ಚಯ ಭವನ ನಿರ್ಮಿಸಬೇಕೆಂಬುದು ಬಹು ದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಕ್ರಮ ವಹಿಸಿ ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದ ವೇಳೆ ಕಟ್ಟಡದ ಶಂಕು ಸ್ಥಾಪನೆ ಕಾರ್ಯಕ್ರಮ ಮಾಡಿಸಲಾಗುವುದು. ನಗರದಲ್ಲಿ ಸರ್ಕಾರಿ ನೌಕರರಿಗೆ ದಿನ ಬಳಕೆ ವಸ್ತುಗಳು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಈ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಈ ಕ್ಯಾಂಟೀನ್‌ನಲ್ಲಿ ಶೇ. 25ರಿಂದ 30ರಷ್ಟು ರಿಯಾಯಿತಿ ದರದಲ್ಲಿ ದಿನ ಬಳಕೆ ವಸ್ತುಗಳು ಸಿಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ರಾಜ್ಯದಲ್ಲಿ 8ನೇ ಸರ್ಕಾರಿ ನೌಕರರ ವ್ಯಾಪಾರ ಮಳಿಗೆಯನ್ನು ನಗರದಲ್ಲಿ ಸ್ಥಾಪಿಸಲಾಗಿದ್ದು, ದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸ್ವದೇಶಿ ಅಭಿಮಾನ ಹಾಗೂ ಸ್ವಾವಲಂಬನೆಯ ಯೋಚನೆಗಳನ್ನು ಬೆಳೆಸಬೇಕು. ನಮ್ಮ ಸ್ಥಳೀಯ ಉತ್ಪಾದಕರಿಗೆ, ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡುವಲ್ಲಿ ಕ್ಯಾಂಟೀನ್‌ಗಳು ಕಾರ್ಯನಿರ್ವವಹಿಸಬೇಕು ಎಂದರು.