ಚಿಕ್ಕಮಗಳೂರು: ಜನಾರ್ದನ್ ರೆಡ್ಡಿ ಬಿಜೆಪಿ ಪಕ್ಷ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಿಸಿದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಒಬ್ಬ ವ್ಯಕ್ತಿಗೆ ಪಕ್ಷ ಕಟ್ಟಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಎರಡಕ್ಕೂ ಸಮಾನ ಅವಕಾಶವಿದೆ. ನೋಡೋಣ ಇದರಲ್ಲಿ ನಮ್ಮ ಮತದಾರರೇ ಪ್ರಭುಗಳು. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಅನ್ನುವುದರ ಮೇಲೆ ಎಲ್ಲವೂ ನಿರ್ಣಯವಾಗುತ್ತದೆ. ಕೆಲವೊಂದನ್ನು ಇವತ್ತೇ ನಿರ್ಣಯಿಸಲು ಸಾಧ್ಯವಿಲ್ಲ. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ. ನಾನು ಅವರನ್ನು ವ್ಯೆಯಕ್ತಿಕ ವಿಷಯದಲ್ಲಿ ಭೇಟಿಯಾಗಿಲ್ಲ. ಬಿಜೆಪಿಯೊಂದಿಗಿನ ಅವರ ಸಂಬಂಧ ಕೆಟ್ಟಿದೆ ಅಂತಲೂ ಹೇಳಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿಯೂ ನನಗೆ ತಿಳಿದಿಲ್ಲ. ಇವತ್ತು ಹೀಗಿದ್ದಿದ್ದು ನಾಳೆ ಏನಾಗುತ್ತೋ ಗೊತ್ತಿಲ್ಲ. ಕಾದು ನೋಡೋಣ ಎಂದರು.
ಇದನ್ನೂ ಓದಿ: ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ!
ಜನಾರ್ದನ್ ರೆಡ್ಡಿ ಹೊಸ ಪಕ್ಷ ಕಟ್ಟಿದ್ರೂ ನಾವು ಬಗ್ಗಲ್ಲ, ಜಗ್ಗಲ್ಲ: ರೇಣುಕಾಚಾರ್ಯ
ದಾವಣಗೆರೆ: ಮಾಜಿ ಸಚಿವ ಜನಾರ್ದನ್ ರೆಡ್ಡಿಯವರು ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದ್ದಾರೆ. ಇದಕ್ಕೆ ನಾವು ಬಗ್ಗಲ್ಲ, ಜಗ್ಗಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ರೆಡ್ಡಿ ವಿರುದ್ಧ ಗುಡುಗಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಮುಸ್ಸೇನಾಳ್ ಗ್ರಾಮದಲ್ಲಿ ಮಾತನಾಡಿದ ಅವರು, ಜನಾರ್ದನ್ ರೆಡ್ಡಿಯವರಿಗೆ ಬಿಜೆಪಿ ಪಕ್ಷ ವಿಶೇಷವಾದ ಸ್ಥಾನವನ್ನು ಕೊಟ್ಟಿತ್ತು. ಪಕ್ಷದಿಂದ ಎಂಎಲ್ಸಿಯಾಗಿ ಮಾಡಿ ಸಚಿವರಾಗಲು ಅವಕಾಶ ನೀಡಿ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಿತ್ತು. ಆದರೆ ಇದೀಗ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ. ಇದರಿಂದ ಪಕ್ಷಕ್ಕೇನು ನಷ್ಟವಾಗುವುದಿಲ್ಲ ಎಂದರು.
ರೆಡ್ಡಿ ಸಹೋದರರಾದ ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ ಮತ್ತು ಅವರ ಆಪ್ತ ಸ್ನೇಹಿತ ಶ್ರೀರಾಮುಲು ಕೂಡ ಬಿಜೆಪಿಯಲ್ಲೇ ಇದ್ದಾರೆ. ಅಲ್ಲದೇ ಜನಾರ್ದನ್ ರೆಡ್ಡಿಯವರನ್ನು ಕಾಂಗ್ರೆಸ್ ಷಡ್ಯಂತರದಿಂದಾಗಿ ಸಿಬಿಐ ಬಂಧಿಸಿತ್ತು. ಹೀಗಾಗಿ ಅವರು ತಮ್ಮ ಅಧಿಕಾರವನ್ನೇ ಕಳೆದುಕೊಂಡಿದ್ದರು. ಆದರೆ ಬಿಜೆಪಿ ಪಕ್ಷ ಎಂದಿಗೂ ಅವರ ಕೈಬಿಟ್ಟಿಲ್ಲ. ಹೀಗಿರುವಾಗ ಅವರು ಯಾಕೆ ನೂತನ ಪಕ್ಷ ಕಟ್ಟಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ನನಗನಿಸುವ ಪ್ರಕಾರ ಜನಾರ್ದನ್ ರೆಡ್ಡಿಯವರು ಇನ್ನೂ ಬ್ರಹ್ಮಲೋಕದಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಇನ್ನೂ ಸದೃಢವಾಗಿದ್ದು, ಮತ್ತೆ ನೂರಕ್ಕೆ ನೂರು ಬಿಜೆಪಿ ಅಧಿಕಾರಕ್ಕೆ ಬರಲಿದೆ. ರೆಡ್ಡಿಯವರೇ, ನಿಮಗೆ ಇಷ್ಟೆಲ್ಲಾ ಪಕ್ಷ ಸ್ಥಾನಮಾನ ನೀಡಿರುವಾಗ ತೊರೆದು ಹೋಗಿರುವುದು ಸರಿಯಲ್ಲ. ಅಲ್ಲದೇ ಮುಂದಿನ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗ ಈ ರೀತಿ ಮಾಡಿರುವುದು ಸೂಕ್ತವಲ್ಲ. ಇಂತಹ ನೂರು ಪಕ್ಷ ನೀವು ಕಟ್ಟಿದರು ಬಿಜೆಪಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಬ್ಲಾಕ್ಮೇಲ್ ಮಾಡಿದರು ಅದು ನಡೆಯಲ್ಲ. ಅಂತಹ ಹಗಲು ಕನಸು ಎಂದಿಗೂ ಕಾಣಬೇಡಿ. ರೆಡ್ಡಿಯವರೇ, ನಿಮ್ಮಲ್ಲೊಂದು ವಿನಂತಿ ಮಾಡುವೆ. ಜಿಲ್ಲೆಗಳನ್ನು ಸಂಚಾರ ಮಾಡುವ ಬಿಜೆಪಿಯ ಒಬ್ಬ ಕಾರ್ಯಕರ್ತನಾಗಿ ಮೊದಲು ಆರೋಪ ಮುಕ್ತರಾಗಿ. ನೀವು ಹೊಸ ಪಕ್ಷ ಕಟ್ಟಿರುವುದರಿಂದ ಬಿಜೆಪಿಗೇನು ನಷ್ಟವಿಲ್ಲ ಎಂದರು.
ಇದನ್ನೂ ಓದಿ:ವ್ಯಾಪಾರ ವ್ಯವಹಾರ ಬಿಟ್ಟು ಬಿಜೆಪಿ ಕಟ್ಟಿದ್ದಕ್ಕೆ ಬೆಲೆ ಸಿಗಲಿಲ್ಲ: ಗಾಲಿ ಜನಾರ್ದನ ರೆಡ್ಡಿ
ರೆಡ್ಡಿ ಹೊಸ ಪಕ್ಷ ಸ್ಥಾಪಿಸಲು ಕಾರಣವೇನು?: ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿದ ಜನಾರ್ದನ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಟ್ಟ ಮಾತು ತಪ್ಪಿದ್ದು, ರಾಜ್ಯ ನಾಯಕರು ಕಡೆಗಣಿಸಿದ್ದು, ಸಿಬಿಐ ಅಧಿಕಾರಿಗಳು ಮುಂಜಾನೆ ದಾಳಿ ನಡೆಸಿ ಮಗಳ ಹೆರಿಗೆಯ ಸಾಕ್ಷಿಗಾಗಿ ಮೊಮ್ಮಗುವನ್ನು ತಡಕಾಡಿದ್ದರಿಂದ ಮನನೊಂದು ವಾಜಪೇಯಿ, ಅಡ್ವಾಣಿ ಒಡನಾಟದ ಬಿಜೆಪಿಯಿಂದ ದೂರವಾಗಲು ನಿರ್ಧರಿಸಿ ರಾಜಕೀಯ ಭವಿಷ್ಯಕ್ಕಾಗಿ ಈ ರೀತಿಯ ನಿರ್ಧಾರ ರೆಡ್ಡಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಜಕಾರಣಕ್ಕೆ ಗಣಿಧಣಿ ರೀ ಎಂಟ್ರಿ: ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಜನಾರ್ದನ ರೆಡ್ಡಿ ಘೋಷಣೆ