ಚಿಕ್ಕಮಗಳೂರು: ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿದ ಆರೋಪದಡಿ ಜಿಲ್ಲೆಯ ಕಡೂರು ತಾಲೂಕಿನಲ್ಲಿ ಈ ಹಿಂದಿನ ತಹಶೀಲ್ದಾರ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧ ತರೀಕೆರೆ ಕಂದಾಯ ಉಪ ವಿಭಾಗದ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ಕಡೂರು ಠಾಣೆಯಲ್ಲಿ ಕಡೂರು ತಾಲೂಕಿನಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಉಮೇಶ್ ಹಾಗೂ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಆಗಿ ಕಾರ್ಯನಿರ್ವಹಿಸಿದ್ದ ನಂಜುಂಡಯ್ಯ ಹಾಗೂ ಬೀರೂರಿನಲ್ಲಿ ರಾಜಸ್ವ ನಿರೀಕ್ಷಕರಾಗಿದ್ದ ಕಿರಣ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದರು.
ತಹಶೀಲ್ದಾರ್ ಜೆ.ಉಮೇಶ್, ಶಿರಸ್ತೇದಾರ್ ನಂಜುಂಡಯ್ಯ ಹಾಗೂ ಬೀರೂರು ಆರ್.ಐ.ಕಿರಣ್ ಕುಮಾರ್ ಅವರು ಬೀರೂರು ಹೋಬಳಿಯ ಉಳ್ಳಿನಾಗರು ಗ್ರಾಮದ ಸ.ನಂ.43 ರಲ್ಲಿದ್ದ 5.04 ಎಕರೆ ಸರ್ಕಾರಿ ಜಾಗವನ್ನು ಹನುಮಯ್ಯ ಬಿನ್ ಚಿಕ್ಕಣ್ಣ ಎಂಬವರಿಗೆ ಯಾವುದೇ ಸರ್ಕಾರಿ ನಿಯಮ ಪಾಲಿಸದೇ ಮಂಜೂರು ಮಾಡಿದ್ದರು. ನಂತರ ಈ ಜಮೀನನ್ನು ರತ್ನಮ್ಮ ಹಾಗೂ ಗೌರಮ್ಮ ಎಂಬವರಿಗೆ ಪೌತಿ ಆಧಾರದ ಮೇಲೆ ಖಾತೆ ದಾಖಲಿಸಿದ್ದರು. ಬಳಿಕ ದಾನಪತ್ರದ ಆಧಾರದ ಮೇಲೆ ಈ ಜಮೀನನ್ನು ನಾರಾಯಣಪ್ಪ ಎಂಬವರ ಹೆಸರಿಗೆ ಖಾತೆ ಮಾಡಿಸಿದ್ದರು.
5.04 ಎಕರೆ ಜಾಗದಲ್ಲಿ 1.30 ಎಕರೆ ಜಾಗವನ್ನು ಕ್ರಯ ಪತ್ರದ ಆಧಾರದ ಮೇಲೆ ರತ್ನಮ್ಮ ಎಂಬವರಿಗೆ ಖಾತೆ ಬದಲಾಯಿಸಿದ್ದರು. ಈ ಎಲ್ಲ ದಾಖಲಾತಿಗಳನ್ನು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಈ ಸಂಬಂಧ ತರೀಕೆರೆ ಉಪ ವಿಭಾಗಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ತರೀಕೆರೆ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಡೂರು ಪೊಲೀಸರು ಕರ್ನಾಟಕ ಭೂಕಂದಾಯ ಕಾಯಿದೆ 1964ರ ಕಲಂ 192 ಎ(2)ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಾಕ್ಷಿ ನಾಶಕ್ಕಾಗಿ 4,500 ರೂಪಾಯಿ ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ!
ಲೋಕಾಯುಕ್ತರ ಬಲೆಗೆ ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್: ಇತ್ತೀಚಿಗೆ, ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ ಖಾತಾ ನೀಡಲು ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಮಧ್ಯವರ್ತಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಬಿಬಿಎಂಪಿ ಕಚೇರಿಯಲ್ಲಿ ಮಹಾದೇಪುರ ವಲಯದ ರೆವಿನ್ಯೂ ಇನ್ಸ್‌ಪೆಕ್ಟರ್ ನಟರಾಜ್ ಅವರ ಪರ 5 ಲಕ್ಷ ರೂ ಲಂಚ ಪಡೆಯುತ್ತಿದ್ದ ಪವನ್ ಎಂಬಾತನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಮುಕ್ತಾ ಡೆವಲಪರ್ಸ್ ಹೆಸರಿನ ಕಂಪನಿ ಕೊಡಿಗೆಹಳ್ಳಿಯಲ್ಲಿ ಬೃಂದಾವನ್ ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, 79 ಫ್ಲ್ಯಾಟ್‌ಗಳಿಗೆ ಖಾತೆಗಾಗಿ ಅರ್ಜಿ ಸಲ್ಲಿಸಿತ್ತು. ರವಿನ್ಯೂ ಇನ್ಸ್‌ಪೆಕ್ಟರ್ ನಟರಾಜ್, ಪ್ರತಿ ಖಾತಾಗೆ 10 ಸಾವಿರದಂತೆ ಒಟ್ಟು 7.90 ಲಕ್ಷ ರೂ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಮುಕ್ತಾ ಡೆವಲಪರ್ಸ್ ಮಾಲೀಕ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ, ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರ ತಂಡ ಮಹಾದೇವಪುರ ಬಿಬಿಎಂಪಿ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ನಟರಾಜ್ ಹಾಗೂ ಪವನ್ನನ್ನು ವಶಕ್ಕೆ ಪಡೆದಿದ್ದರು.