ಚಿಕ್ಕಮಗಳೂರು: ಹುಲಿ ದಾಳಿಗೆ ಸಿಂಧಿ ಹಸು ಬಲಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಮತ್ತಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಮತ್ತಿಕಟ್ಟೆ ಬ್ಲೂ ಮೌಂಟೇನ್ ಎಸ್ಟೇಟ್ ಆನಂದ್ ಮಿಸ್ಕಿತ್ ಎಂಬುವವರಿಗೆ ಸೇರಿದ ಕಾಫಿ ಎಸ್ಟೇಟ್ನಲ್ಲಿ ಹುಲಿ ಹಸುವಿನ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ ಎಂದು ತಿಳಿದು ಬಂದಿದೆ. ಗ್ರಾಮದ ಮಧುಸೂದನ್ ಚಂದ್ರಾವತಿ ಎಂಬುವವರಿಗೆ ಸೇರಿದ ಹಸು ಇದಾಗಿದೆ. ಸ್ಥಳಕ್ಕೆ ಉಪವಲಯ ಅಧಿಕಾರಿ ಉಮೇಶ್ ಮತ್ತು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೀವನಕ್ಕೆ ಆಸರೆಯಾಗಿದ್ದ ಹಸು: ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದ ಕುಟುಂಬ ಈಗ ಬೆಲೆ ಬಾಳುವ ಹಸುವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದ ಬಡ ಕುಟುಂಬಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರೀತಿಯಿಂದ ಸಾಕಿದ್ದ ಹಸುವನ್ನು ಹುಲಿ ತಿಂದಿರುವ ಭಯಾನಕ ದೃಶ್ಯ ಕಂಡು ಹಸುವಿನ ಮಾಲೀಕರು ಕಣ್ಣೀರು ಸುರಿಸಿದ್ದಾರೆ.
ನಿರಂತರವಾಗಿ ಗೋವುಗಳ ಬೇಟೆ: ಬಣಕಲ್ ಹೋಬಳಿ ಹೆಗ್ಗುಡ್ಲು, ಮತ್ತಿಕಟ್ಟೆ, ಬಿ.ಹೊಸಳ್ಳಿ, ಬೆಳಗೋಡು, ತಳವಾರ ಹಾಗೂ ಭಾರತೀಬೈಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿಗಳ ದಾಳಿಗೆ ಹತ್ತಾರು ಜಾನುವಾರುಗಳು ಬಲಿಯಾಗಿವೆ. ಇತ್ತೀಚೆಗೆ ಕನ್ನಗೆರೆ ಸಮೀಪ ಒಂದೇ ದಿನ ಮೂರು ಹಸುಗಳು ಹುಲಿ ದಾಳಿಗೆ ಬಲಿಯಾಗಿದ್ದವು. ಈ ಬಗ್ಗೆ ಸಾರ್ವಜನಿಕರು ಪ್ರತಿಭಟನೆ ಸಹ ಮಾಡಿದ್ದಾರೆ. ನಿರಂತರವಾಗಿ ಗೋವುಗಳನ್ನು ಹಿಡಿದು ತಿನ್ನುತ್ತಿರುವ ಹುಲಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಬ್ಬರನ್ನು ಬಲಿ ಪಡೆದ ಹುಲಿ: ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಹುಲಿಯೊಂದು ಇಬ್ಬರನ್ನು ಬಲಿ ಪಡೆದಿತ್ತು. ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಮತ್ತು ಮೊಮ್ಮಗನ ಶವ ನೋಡಲು ಬಂದ ತಾತನನ್ನು ಹುಲಿ ಬಲಿ ಪಡೆದಿರುವುದು ತಿಳಿದು ಬಂದಿತ್ತು. ಇಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿ ಎಳೆದೊಯ್ದ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪದ ಪಲ್ಲೇರಿ ಗ್ರಾಮದಲ್ಲಿ ನಿನ್ನೆ(ಫೆ.13) ನಡೆದಿತ್ತು.
ವೃದ್ಧನನ್ನು ಎಳೆದೊಯ್ದಿದ್ದ ವ್ಯಾಘ್ರ: ಫೆ.13ರಂದು ಕೊಡಗಿನ ಕುಟ್ಟ ಗ್ರಾಮದ ಪಲ್ಲೇರಿಯಲ್ಲಿ ಹುಲಿ ದಾಳಿ ಮಾಡಿದ್ದು, ಮೃತರನ್ನು ಪಲ್ಲೇರಿಯ ರಾಜು (70) ಎಂದು ಗುರುತಿಸಲಾಗಿತ್ತು. ಮೃತ ರಾಜು ಅವರು ಹುಲಿ ದಾಳಿಯಿಂದ ಮೃತಪಟ್ಟ ಮೊಮ್ಮಗನ ನೋಡಲು 7 ಗಂಟೆ ಸುಮಾರಿಗೆ ಮನೆಯಿಂದ ಹೊರಬಂದ ವೇಳೆ ಹುಲಿ ದಾಳಿ ಮಾಡಿ ಎಳೆದೊಯ್ದಿತ್ತು. ರಾಜು ಅವರ ತಲೆ ಭಾಗಕ್ಕೆ ಹುಲಿ ಕಚ್ಚಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: 24 ಗಂಟೆಯೊಳಗೆ ಇಬ್ಬರನ್ನು ಬಲಿ ಪಡೆದ ಹುಲಿ.. ಬೆಚ್ಚಿಬಿದ್ದ ಮಡಿಕೇರಿ ಜನ
ಬಾಲಕನನ್ನು ಬಲಿ ಪಡೆದಿದ್ದ ಹುಲಿ: ಫೆ. 12ರಂದು ಹುಲಿಯೊಂದು ಬಾಲಕನನ್ನು ಬಲಿ ಪಡೆದಿತ್ತು. ಕೆ ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಾಲಕ ಮತ್ತು ಪೋಷಕರು ತೆರಳಿದ್ದರು. ಸಂಜೆ ಆರೇಳು ಗಂಟೆಯ ಸುಮಾರಿಗೆ ಕಾಫಿ ತೋಟದ ಮನೆಯ ಮುಂದೆ ಬಾಲಕ ಆಟವಾಡುತ್ತಿದ್ದನು. ಈ ವೇಳೆ ದಾಳಿ ಮಾಡಿದ ಹುಲಿ ಬಾಲಕನನ್ನು ಕೊಂದು ಹಾಕಿತ್ತು.
ಇದನ್ನೂ ಓದಿ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಎಳೆದೊಯ್ದ ಹುಲಿ.. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ