ಚಿಕ್ಕಮಗಳೂರು : ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ದೇಶ ಮತ್ತು ರಾಜ್ಯದಲ್ಲಿ ನಡೆದಿರುವ ಪ್ರಮುಖ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90ರಷ್ಟು ಹಗರಣಗಳು ಕಾಂಗ್ರೆಸ್ ಅವಧಿಯಲ್ಲೇ ನಡೆದಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
ಚಿಕ್ಕಮಗಳೂರು ನಗರದಲ್ಲಿಂದು ಮಾತನಾಡಿದ ಅವರು, ''ದೇಶದಲ್ಲಿ ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ. ಇದೀಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಕೈ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ. ನಾವು ಚುನಾವಣೆ ಗೆಲ್ಲಲು ಎಷ್ಟೆಲ್ಲಾ ಖರ್ಚು ಮಾಡಿದ್ದೇವೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತಿದ್ದೀವಾ?. ಖರ್ಚು ಮಾಡಿರೋದು ವಸೂಲಾಗ್ಬೇಕು. ಇಲ್ಲಾಂದ್ರೆ ನಮ್ಮ ಹೆಂಡ್ತಿ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸ್ಬೇಕಾ ಅಂತ ಮಾತನಾಡುವ ಸ್ಥಿತಿ ಅವರದ್ದು'' ಎಂದರು.
''ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ 40% ಕಮಿಷನ್ ದಂಧೆ ಈಗ 15% ಆಗಿರಬಹುದು ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ಗಮನಿಸಿದ್ದೇನೆ. ಆದರೆ, ನೀವು ಹೇಳುತ್ತಿರುವ 15% ಹಳೆಯ ವಿಚಾರ. ಈಗ ಅದು 50% ದಾಟಿರಬಹುದು'' ಎಂದು ಪ್ರತ್ಯುತ್ತರ ನೀಡಿದರು.
ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ: ''ಸರ್ಕಾರ ಪ್ರಾಮಾಣಿಕ ಅನ್ನೋದಾಗಿದ್ರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸಿ.ಟಿ.ರವಿ ಹೇಳಿದರು. ಇದೇ ಗುತ್ತಿಗೆದಾರರ ಬಳಿಯಿಂದ ನನಗೆ ಬಂದಿರುವ ಮಾಹಿತಿ ಪ್ರಕಾರ, ಮೊದಲಿಗೆ 7% ಕಮಿಷನ್ ನಿಗದಿಪಡಿಸಿದ್ರು. ಆದರೆ, ಮಧ್ಯವರ್ತಿಗಳು 10% ಗೆ ಪಟ್ಟು ಹಿಡಿದ ಬಳಿಕ ಇದೀಗ 15% ಫಿಕ್ಸ್ ಮಾಡಿ, ಅಷ್ಟು ಕೊಟ್ಟರೆ ಮಾತ್ರ ಬಿಲ್ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ'' ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ : ಕೃಷಿ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ವಾಪಸ್ ಸೇರಿದಂತೆ ರೈತ ಸಂಬಂಧಿ ಯೋಜನೆಗಳನ್ನು ರಾಜ್ಯ ಬಜೆಟ್‌ನಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ (ಆಗಸ್ಟ್ 9-2023) ಪ್ರತಿಭಟನೆ ನಡೆಸಿದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಿ.ಟಿ.ರವಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದಕ್ಕೂ ಮುನ್ನ ಧರಣಿ ಉದ್ದೇಶಿಸಿ ಮಾತನಾಡಿದ ಸಿ.ಟಿ.ರವಿ, "ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ರೈತರ ಹಿತ ಕಾಪಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀರಾವರಿಗೂ ಹಣ ಇಲ್ಲ. ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭೂಸಿರಿ ಸೇರಿ ಅನೇಕ ಯೋಜನೆಗಳು ರದ್ದಾಗಿವೆ. ರೈತರ ಬೆನ್ನುಮೂಳೆ ಮುರಿಯಲು ರಾಜ್ಯ ಸರ್ಕಾರ ಮುಂದಾಗಿದೆ" ಎಂದಿದ್ದರು.
"ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಕ್ಕೆ ಬಂದ ಕೇವಲ 80 ದಿನಗಳಲ್ಲಿ ರಾಜ್ಯದ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಪೂರಿತ ನೀರು ಸೇವಿಸಿ ಹಲವರು ಮೃತಪಟ್ಟಿದ್ದಾರೆ" ಎಂದು ದೂರಿದ್ದರು.
ಇದನ್ನೂ ಓದಿ: 'ಸರ್ಕಾರದ ರೈತ ವಿರೋಧಿ ಧೋರಣೆ': ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ; ಸಿ.ಟಿ.ರವಿ ಸೇರಿ ಹಲವರು ವಶಕ್ಕೆ