ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಇಂದು ಕೂಡ ಮುಂದುವರೆದಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತುಂಗ, ಭದ್ರಾ, ಹೇಮಾವತಿ, ನದಿಗಳು ಉಕ್ಕಿ ಹರಿಯಲಾರಂಭಿಸಿವೆ.
4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಯ ನೀರು ರಸ್ತೆಗಳಿಗೆ ನುಗ್ಗಲು ಆರಂಭಿಸಿದೆ. ಅಪಾಯದ ಮಟ್ಟ ಮೀರಿ ಎಲ್ಲಾ ನದಿಗಳು ಹರಿಯಲು ಆರಂಭಿಸಿವೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ವ್ಯತ್ಯಯ ಕಂಡು ಬರುತ್ತಿದೆ. ಭಯದ ವಾತಾವರಣದಲ್ಲಿ ಇಲ್ಲಿನ ಜನರು ಬದುಕುವಂತಾಗಿದೆ.
ಕೊಪ್ಪ ತಾಲೂಕಿನ ಗಾಳಿ ಗಂಡಿ ಗ್ರಾಮದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಈ ಭಾಗದಲ್ಲಿ ಭೂಮಿ ಕುಸಿದು ಮನೆಗೆ ಬಂದು ಮಣ್ಣು ಅಪ್ಪಳಿಸಿದೆ. ಮನೆಯ ಒಂದು ಭಾಗ ಸಂಪೂರ್ಣ ಜಖಂ ಆಗಿದೆ. ಮನೆಯೊಳಗೆ ನೀರು ಸಹ ನುಗ್ಗಿದೆ. ಬೃಹತ್ ಗಾತ್ರದ ಮರವೊಂದು ರವೀಂದ್ರ ಎಂಬುವರಿಗೆ ಸೇರಿದ ಮನೆಯ ಮೇಲೆ ಬಿದ್ದಿರೋದ ಅದು ಸಂಪೂರ್ಣ ನಾಶವಾಗಿದೆ.
ಮೂಡಿಗೆರೆ ತಾಲೂಕಿನ ಕುದುರೆಮುಖ ವ್ಯಾಪ್ತಿಯಲ್ಲಿಯೂ ನಿರಂತರ ಮಳೆಯಾಗುತ್ತಿದೆ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹೆಬ್ಬಾಳ ಸೇತುವೆ ಮೇಲೆ ಸುಮಾರು 10 ಅಡಿ ನೀರು ಹರಿಯುತ್ತಿದೆ. ಹೆಬ್ಬಾಳ ಸೇತುವೆ ಸಮೀಪದ ಎಲ್ಲಾ ಅಂಗಡಿಗಳಿಗೂ ನೀರು ನುಗ್ಗುತ್ತಿದೆ.