ಚಿಕ್ಕಮಗಳೂರು: ಕಳೆದ ಬಾರಿಯ ಸರ್ಕಾರ ದತ್ತಪೀಠದಲ್ಲಿ ಜಯಂತಿ ಆಚರಿಸಿದಂತೆ ಈ ಬಾರಿ ಮಾಡಬಾರದು. ಒಂದು ವರ್ಗದ ಮನಸ್ಸಿಗೆ ನೋವಾಗುವಂತಹ ಕಾರ್ಯಕ್ರಮಗಳನ್ನು ಮಾಡಬಾರದು. ಜಿಲ್ಲಾಧಿಕಾರಿ ಕಳೆದ ವರ್ಷ, ಮುಜರಾಯಿ ಇಲಾಖೆ ಆದೇಶದಂತೆ ಆಚರಣೆ ಎನ್ನುವ ಬದಲಿಗೆ ಕೋರ್ಟ್ ಆದೇಶದಂತೆ ಜಯಂತಿ ಆಚರಿಸಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಹೆಚ್ ಹೆಚ್ ದೇವರಾಜ್ ಒತ್ತಾಯಿಸಿದ್ದಾರೆ.
ದತ್ತ ಜಯಂತಿಯನ್ನು ನಾಡ ಉತ್ಸವದಂತೆ ಮಾಡುತ್ತೇವೆ ಅಂತ ಹಿಂದೂ ಸಂಘಟನೆಗಳು ಹೇಳಿವೆ. ಈ ಬಾರಿಯ ದತ್ತ ಜಯಂತಿಯ 2022ರ ಮುಜರಾಯಿ ಇಲಾಖೆ ನಿರ್ದೇಶನದಂತೆ ಎಂದು ಜಿಲ್ಲಾಡಳಿತ ತಿಳಿಸಿದ್ದಕ್ಕೆ ಕಾಂಗ್ರೆಸ್ ವಕ್ತಾರ ಹಾಗೂ ಬಾಬಾ ಬುಡನ್ಗಿರಿ ಹೋರಾಟ ಸಮಿತಿ ಸದಸ್ಯರಾಗಿರುವ ಹೆಚ್ ಹೆಚ್ ದೇವರಾಜ್ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಇದು ರಾಜಕೀಯ ಪ್ರೇರಿತ ಉತ್ಸವ. ದತ್ತಜಯಂತಿ ಉತ್ಸವದ ಕುರಿತು ಡಿಸಿ-ಎಸ್ಪಿ ಕೆಲ ಸಂಘಟನೆಗಳ ಜೊತೆ ಕೈ ಜೋಡಿಸಿದರೆ ಸಿಎಂ ಅವರಿಗೆ ದೂರು ನೀಡುತ್ತೇವೆ. ಕಳೆದ ಬಾರಿಯ ಬಿಜೆಪಿ ಸರ್ಕಾರ, ಕೋರ್ಟ್ ಆದೇಶ, ಕಾನೂನು ಎಲ್ಲವನ್ನೂ ಉಲ್ಲಂಘನೆ ಮಾಡಿ, ಅವರಿಗೆ ಮನಸ್ಸಿಗೆ ಬಂದಂತೆ ಜಯಂತಿ ಆಚರಿಸಿದ್ದರು ಎಂದು ಆರೋಪಿಸಿದ್ದಾರೆ. ಇಲ್ಲಿ ಈ ಹಿಂದೊಮ್ಮೆ ಇದ್ದಂತಹ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಬೇಕು. ಇದು ಈ ನಾಡಿನ ಸರ್ವ ಧರ್ಮಗಳ ಶ್ರದ್ಧಾ ಕೇಂದ್ರ. ಹಾಗಾಗಿ ಕೋರ್ಟ್ ಆದೇಶದಂತೆ ದತ್ತ ಜಯಂತಿ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಬಾಬಾ ಬುಡನ್ಗಿರಿ ಹೋರಾಟ ಸಮಿತಿ ಸದಸ್ಯ ಸಿರಾಜ್ ಮಾತನಾಡಿ, ಕೋರ್ಟ್ ಆದೇಶವಿಲ್ಲದೆ ಅಲ್ಲಿದ್ದ ದತ್ತಪಾದುಕೆಗಳನ್ನು ಕೆಲವರು ಸ್ಥಳಾಂತರಿಸಿದ್ದಾರೆ. ತುಳಸಿಕಟ್ಟೆ ಪಕ್ಕ ಹೋಮ ಮಾಡೋದಕ್ಕೆ ಅವಕಾಶ ಕೊಟ್ಟಿದ್ದಾರೆ. ಅದೇ ರೀತಿ ನಮಗೂ ಅದರ ಪಕ್ಕದಲ್ಲಿರುವ ಗೋರಿಗಳಿಗೆ ಉರುಸ್ ಸಮಯದಲ್ಲಿ ಬಟ್ಟೆ ಹಾಕಲು ಅವಕಾಶ ನೀಡಲಿ ಎಂದರೆ ಅದಕ್ಕೆ ಕೋರ್ಟ್ ಆದೇಶವಿಲ್ಲ ಅಂತಾರೆ. ಹಾಗಾದರೇ ಇದಕ್ಕೆ ಆದೇಶ ಎಲ್ಲಿದೆ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತ ಒಂದು ವರ್ಗದ ಪರ ಕೆಲಸ ಮಾಡ್ತಿದೆ. ಹಿಂದೂ ಸಂಘಟನೆಗಳಿಗೆ ಹೋಮ ಮಾಡೋದಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ನಮಗೂ ನಮಾಜ್ ಮಾಡಲು ಅನುಮತಿ ನೀಡಲಿ. ಕಳೆದ ಬಾರಿ ಬಿಜೆಪಿ ಸರ್ಕಾರವಿತ್ತು. ಈ ಬಾರಿ ಕಾಂಗ್ರೆಸ್ ಸರ್ಕಾರವಿದೆ. ಆದ್ರೆ, ಈ ಸರ್ಕಾರವೂ ನಮ್ಮ ವಿರೋಧವಾಗಿಯೇ ಹೋಗುತ್ತಿದೆ. ಈ ಬಾರಿ ನಮ್ಮ ಬೇಡಿಕೆ ಈಡೇರದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತೀವಿ ಎಂದು ಸಿರಾಜ್ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ: ಸಮಯ ಬಂದರೆ ದತ್ತಮಾಲೆ ಹಾಕುವೆನೆಂದ ಹೆಚ್ಡಿಕೆ ಹೇಳಿಕೆಗೆ ಹಿಂದೂಪರ ಸಂಘಟನೆಗಳ ಸಂತಸ